Police Constable Exam ಸಾಂದರ್ಭಿಕ ಚಿತ್ರ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇಂದು (ಆ.02) ಬೆಳಿಗ್ಗೆ ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ (
ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ (ಲೀಕ್) ಎಂದು ಆರೋಪಿಸಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಗೊಂದಲಕ್ಕೆ ಕಾರಣವೇನು?
ಇಂದು ಬೆಳಿಗ್ಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆ, ಅಭ್ಯರ್ಥಿಗಳಿಗೆ ವಿತರಿಸಲಾದ ಪ್ರಶ್ನೆ ಪತ್ರಿಕೆಯ ಸಂಖ್ಯೆ ಮತ್ತು OMR ಶೀಟ್ ಸಂಖ್ಯೆ ಪರಸ್ಪರ ಹೊಂದಾಣಿಕೆಯಾಗಲಿಲ್ಲ. ಇದರಿಂದ ಪರೀಕ್ಷಾರ್ಥಿಗಳಲ್ಲಿ ತೀವ್ರ ಗೊಂದಲ ಹಾಗೂ ಅನುಮಾನ ಸೃಷ್ಟಿಯಾಯಿತು. ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕೆಲವು ಅಭ್ಯರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ, ಪರೀಕ್ಷಾ ಕೇಂದ್ರದಿಂದ ಹೊರಬಂದರು.
ಪರೀಕ್ಷಾ ಕೇಂದ್ರದ ಮುಖ್ಯ ಗೇಟ್ ಮುಂಭಾಗ ಜಮಾಯಿಸಿದ ನೂರಾರು ಅಭ್ಯರ್ಥಿಗಳು ಸರ್ಕಾರದ ಹಾಗೂ ಸಿಬ್ಬಂದಿಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ!
ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ವಿಷಯ ತಿಳಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರತಿಭಟನಾನಿರತ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ, ಗೊಂದಲ ಪರಿಹರಿಸಲು ಕ್ರಮ ಕೈಗೊಂಡಿದ್ದಾರೆ.