ಕನ್ನಡ ಸಾಹಿತ್ಯ ಪರಿಷತ್ತು  
ರಾಜ್ಯ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಕ್ರಮ ಆರೋಪ ಒಂದು ಷಡ್ಯಂತ್ರ

ಪ್ರಮುಖ ಮುಖ್ಯಾಂಶಗಳು

  • * ನಿವೃತ್ತ ನ್ಯಾ. ವಿಚಾರಣಾ ಆಯೋಗದಿಂದ ತನಿಖೆಗೆ ಒತ್ತಾಯ
  • * * ವಿಚಾರಣೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ರಾಜ್ಯಪಾಲರಿಗೆ ದೂರು
ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತಿನ ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ವಿಚಾರಣಾ ಆಯೋಗ ರಚಿಸಲು ಒತ್ತಾಯಿಸಿ ನಾಡೋಜ ಡಾ. ಮಹೇಶ ಜೋಶಿ, ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಜೋಶಿ ಅವರು ಸರ್ಕಾರಕ್ಕೆ ಬರೆದಿರುವ ಪತ್ರ ವಿಜಯವಾಣಿಗೆ ಲಭ್ಯವಾಗಿದೆ. ಅದರಲ್ಲಿ ದೂರುದಾರರು ರಾಜಕೀಯ ಪ್ರಭಾವ ಹೊಂದಿರುವುದರಿಂದ ಪರಿಷತ್ತಿನ ವ್ಯವಹಾರಗಳ ಕುರಿತು ತನಿಖೆ ನಡೆಸುವ ಸಕ್ಷಮ ಪ್ರಾಧಿಕಾರದವರು ಹಾಗೂ ವಿಚಾರಣಾಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದಾರೆ. ಹಾಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಅನುಮಾನವಾಗಿದೆ. ಹಾಗಾಗಿ ನ್ಯಾಯಮೂರ್ತಿಗಳ ವಿಚಾರಣ ಆಯೋಗ ರಚಿಸಿ, ಅದರ ಮೂಲಕ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಇತಿಹಾಸ, ಗೌರವ ಹಾಗೂ ಘನತೆಯನ್ನು ಹೊಂದಿದ್ದು, ಆದರ ಪಾವಿತ್ರ್ಯತೆಗೆ ಧಕ್ಕೆ ಆಗದಂತೆ ಕ್ರಮ ವಹಿಸಬೇಕಿದೆ. ಈ ಹಿಂದೆ ಪರಿಷತ್ತಿನ ಅಧ್ಯಕ್ಷರೊಬ್ಬರ ವಿರುದ್ಧ ಆರೋಪ ಕೇಳಿಬಂದ ಸಂದರ್ಭದಲ್ಲಿ ಸಾಹಿತಿಗಳು, ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಯಾರಿಂದ ತನಿಖೆ ಮಾಡಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತ್ತು. ಆಗ ನಿಷ್ಪಕ್ಷಪಾತ ವಿಚಾರಣೆಗಾಗಿ ನ್ಯಾ. ಪಿ.ಕೆ. ಶ್ಯಾಮ್‌ಸುಂದರ್ ಆಯೋಗ ರಚಿಸಿ, ಆ ವರದಿ ಆಧಾರದ ಮೇಲೆ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ ತಮ್ಮ ಪ್ರಕರಣದಲ್ಲಿ ಆರೋಪ ಸಾಬೀತಾಗುವ ಮುನ್ನವೇ ಕೇವಲ ದೂರುಗಳ ಆಧಾರದ ಮೇಲೆ ಅಧಿಕಾರ ಮೊಟಕುಗಳಿಸಿ ಆಡಳಿತಾಧಿಕಾರಿ ನೇಮಿಸಿ, ನಂತರ ಆರೋಪಕ್ಕೆ ಸಂಬಂಧಿಸಿದ ದಾಖಲೆ ಹುಡುಕಾಟ ನಡೆಸಲಾಗುತ್ತಿದೆ. ಶತಾಯಗತಾಯ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ ನ್ಯಾಯಮೂರ್ತಿ ವಿಚಾರಣ ಆಯೋಗ ರಚಿಸಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.
ತಮ್ಮ ಅಧಿಕಾರವಧಿಯಲ್ಲಿ ಪರಿಷತ್ತಿಗೆ ಬಂದಿರುವ ಅನುದಾನ, ಹಣಕಾಸು ಸಮಿತಿ, ಕಾರ್ಯಕಾರಿ ಸಮಿತಿಗಳ ಅನುಮೋದನೆಯೊಂದಿಗೆ ಕೈಗೊಂಡಿರುವ ಕಾರ್ಯಗಳು, (ಸಾಹಿತ್ಯ ಸಮ್ಮೇಳನ, ಸದಸ್ಯರ ಶುಲ್ಕ ಇಳಿಕೆ, ಹೊಸ ಸದಸ್ಯತ್ವ, ಕನ್ನಡ ಶಾಲೆ ಉಳಿಸಲು ಕೈಗೊಂಡ ಕ್ರಮ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಕಾನೂನು ಪ್ರಯತ್ನ, ಪ್ರತಿಮೆಗಳ ಸ್ಥಳಾಂತರ, ದತ್ತಿ ಪ್ರಶಸ್ತಿಗಳ ಆಯ್ಕೆ, ಶಾಲೆಗಳಿಗೆ ಪುಸ್ತಕ ವಿತರಣೆ ಇತ್ಯಾದಿ) ಮಾಹಿತಿಯೊಂದಿಗೆ ತಮ್ಮ ವಿರುದ್ಧ ನಡೆದಿರುವ ಹುನ್ನಾರಗಳ ಕುರಿತು ಪತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ.

ಏಕವ್ಯಕ್ತಿಯ ನಿರ್ಧಾರ ಸಾಧ್ಯವಿಲ್ಲ :

2022-25ರವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಸಚಿವ ಸ್ಥಾನಮಾನದಲ್ಲಿದ್ದವರು, ದಾಖಲೆಯ ಬಹುಮತದಿಂದ ಗೆದ್ದು, ಅಧಿಕಾರ ವಹಿಸಿಕೊಂಡವರು. ಅಲ್ಲದೆ ಪರಿಷತ್ತಿನ ನಿಯಮದಂತೆ ಅಲ್ಲಿ ನಡೆಯುವ ಕಾರ್ಯಕಲಾಪಗಳು, ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಣಯಗಳು ಅಧ್ಯಕ್ಷರ ಏಕವ್ಯಕ್ತಿಯ ತೀರ್ಮಾನ ಆಗಿರುವುದಿಲ್ಲ. ಅಲ್ಲಿನ ಹಣಕಾಸು ಸಮಿತಿ, ಪ್ರಕಟಣಾ ಸಮಿತಿ, ಕಾರ್ಯಕಾರಿ ಸಮಿತಿಗಳ ಸದಸ್ಯರು ಸೇರಿ ಪರಿಷತ್ತಿನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಆದರೆ ಇಲ್ಲಿ ಕೇವಲ ಅಧ್ಯಕ್ಷರನ್ನು ಮಾತ್ರವೇ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿ ಆರೋಪ ಮಾಡಲಾಗಿದೆ. ಈ ಕ್ರಮ ಸರಿಯಲ್ಲ ಎಂಬ ಕಾನೂನು ಪಂಡಿತರು ಅಭಿಪ್ರಾಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಿಯಮ ಬಾಹಿರ:

ಪರಿಷತ್ತು ಅಧ್ಯಕ್ಷರ ವಿರುದ್ಧ ದೂರು ನೀಡಿರುವ 14 ಮಂದಿ ರಾಜಕೀಯ ಪ್ರಭಾವಿತರಾಗಿದ್ದು, ಅಕ್ರಮ ನಡೆದಿದೆ ಎಂಬ ಅವರ ದೂರುಗಳು ಯಾವುದೂ ಸ್ಪಷ್ಟವಾಗಿಲ್ಲ. ಕೇವಲ ಅಧಿಕಾರ ದುರುಪಯೋಗ ಆಗಿದೆ ಎಂದಷ್ಟೇ ಹೇಳುತ್ತಿದ್ದಾರೆ. ಆದರೆ ಅದು ಎಷ್ಟು, ಯಾವಾಗ, ಯಾವುದರಿಂದ, ಹೇಗೆ ಎಂಬ ಯಾವ ಮಾಹಿತಿಯನ್ನು ನೀಡದೆ, ಕೇವಲ ಅಕ್ರಮ ನಡೆದಿದಿದೆ ಎಂಬುದರ ಮಾಹಿತಿ ಇಲ್ಲದೆ ಆರೋಪ ಒಂದನ್ನೇ ಪರಿಗಣಿಸಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲಾಗಿದೆ. ನಂತರ ದಾಖಲೆ ಹುಡುಕುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಇಲ್ಲಿಯವರೆಗೂ ನಡೆದಿರುವುದೆಲ್ಲವೂ ನಿಯಮ ಬಾಹಿರವಾಗಿದೆ. ಹಾಗಾಗಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಆಗುವ ಅಗತ್ಯವಿದೆ ಎಂಬುದನ್ನು ದಾಖಲಿಸಿದ್ದಾರೆ.

ವಿಚಾರಣೆ ಅವಧಿ ಕಾನೂನುಬಾಹಿರ:

ಪರಿಷತ್ತಿನಲ್ಲಿ ಅಕ್ರಮಗಳ ಕುರಿತು ವಿಚಾರಣೆಗೆ ಸಂಬಂಧಿಸಿಂತೆ ವಿಚಾರಣಾ ವರದಿ ನೀಡಲು ಸಕ್ಷಮ ಪ್ರಾಧಿಕಾರವು ವಿಚಾರಣಾಧಿಕಾರಿಗಳಿಗೆ 45 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ಒತ್ತಡಕ್ಕೆ ಮಣಿದ ವಿಚಾರಣಾಧಿಕಾರಿಗಳು ಕೇವಲ 33 ದಿನಗಳಲ್ಲೇ ತರಾತುರಿಯಲ್ಲಿ ಮಧ್ಯಂತರ ವರದಿ ನೀಡಿ, ಆಡಳಿತಾಧಿಕಾರಿ ನೇಮಕಕ್ಕೆ ಶಿಾರಸು ಮಾಡಿದ್ದಾರೆ. ಇದರಿಂದ ಪರಿಷತ್ತಿನ ಅಧ್ಯಕ್ಷರಿಗೆ 12 ದಿನಗಳ ಕಾಲಾವಧಿಯ ವಂಚನೆಯಾಗಿದೆ. ಇದಲ್ಲದೆ ಮಧ್ಯಂತರ ವರದಿ ನೀಡುವ ಮೊದಲೇ ಸಹಕಾರ ಇಲಾಖೆ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಸರ್ಕಾರದ್ದೇ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಈ ಎಲ್ಲವನ್ನು ಗಮನಿಸಿದಾಗ ಇದು ಪರಿಷತ್ತಿನ ಅಧ್ಯಕ್ಷರ ವಿರುದ್ಧ ದುರುದ್ದೇಶದಿಂದ ಕೂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗಾಗಿ ವಿಚಾರಣೆ ನ್ಯಾಯಾಲಯದಲ್ಲಿ ಇರುವುದರಿಂದ ಇದರ ಕುರಿತು ನ್ಯಾಯಾಂಗ ತನಿಖೆ ಆಗುವುದೇ ಸೂಕ್ತ ಎಂದು ಕಾನೂನು ಪಂಡಿತರ ಅಭಿಪ್ರಾಯವನ್ನು ಪತ್ರ ಮುಖೇನ ಮಹೇಶ ಜೋಶಿ ತಿಳಿಸಿದ್ದಾರೆ.