High court 
ರಾಜ್ಯ

ಯುವತಿಗೆ ಗುಪ್ತಾಂಗ ತೋರಿಸಿದ ಆರೋಪ| ಯುವಕನ ಮೇಲಿನ ಕೇಸ್ ರದ್ದು| High court

ಬೆಂಗಳೂರು: ಯುವತಿಗೆ ಗುಪ್ತಾಂಗ ತೋರಿಸಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಲೈಂಗಿಕ ಕಿರುಕುಳ ಆರೋಪದಲ್ಲಿ ಕೋಡಿಗೆಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಹೈಕೋರ್ಟ್​ ರದ್ದುಪಡಿಸಿದೆ. 
ನಾನು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ. ಎಲ್ಲಿಯೂ ಶೌಚಾಲಯ ಸಿಗದ ಕಾರಣ ರೈಲ್ವೇ ಹಳಿ ಬಳಿ ನೈಸರ್ಗಿಕ ಕರೆ ಪೂರೈಸುತ್ತಿದ್ದೆ. ಆ ವೇಳೆ ಯುವತಿ ಅಲ್ಲಿಗೆ ಬಂದ ಕಾರಣ ಗಾಬರಿಯಿಂದ ವರ್ತಿಸಿದ್ದೆ ಎಂಬ ಯುವಕನ ವಾದನ್ನು ನ್ಯಾಯಾಲಯ ಪರಿಗಣಿಸಿದೆ.
ಪ್ರಕರಣ ರದ್ದುಕೋರಿ ಯುವಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಬಸ್​ನಲ್ಲಿ ದೂರ ಪ್ರಯಾಣ ಮಾಡುವಾಗ ಶೌಚಾಲಯಕ್ಕೆ ಹೋಗಲು ಬಸ್​ನಿಂದ ಇಳಿದಿದ್ದಾನೆ. ಆದರೆ, ಎಲ್ಲಿಯೂ ಶೌಚಾಲಯ ಸಿಗದ ಕಾರಣ ಅನಿವಾರ್ಯವಾಗಿ ಹಳಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆ ಸಮಯದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಮಹಿಳೆಯ ನತೆಗೆ ಧಕ್ಕೆ ತರುವ ದುರುದ್ದೇಶ ಯುವಕನಿಗಿರಲಿಲ್ಲ. ಆಕಸ್ಮಿಕವಾಗಿ ಯುವತಿಗೆ ಕಾಣಿಸಿಕೊಂಡಿದ್ದಾನೆ. ಇದು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ತನ್ನನ್ನು ನೋಡಿ ಆ ವ್ಯಕ್ತಿ ತಿರುಗಿದಾಗ ಖಾಸಗಿ ಅಂಗವನ್ನು ಪ್ರದರ್ಶಿಸಿ ಸನ್ನೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೋಲೀಸರು ಲೈಂಗಿಕ ಕಿರುಕುಳ ಆರೋಪದಡಿ ಚಾರ್ಜ್​ಶೀಟ್​ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವೂ ಸಹ ಇದನ್ನು ಪರಿಗಣಿಸಿ ಸಮನ್ಸ್​ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯುವಕ ಹೈಕೋರ್ಟ್​ ಮೆಟ್ಟಿಲೇರಿದ್ದ.