ಅಂಕಿತ ಪುಸ್ತಕ ಪ್ರಕಾಶನ ಪ್ರಟಿಸಿರುವ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ರಚನೆಯ "ಅಲ್ಲಮ ಕಥನ' ಕೃತಿಯನ್ನು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಬಿಡುಗಡೆ ಮಾಡಿದರು.
- ಪ್ರೊ.ಮಲ್ಲೇಪುರಂ ವೆಂಕಟೇಶ ರಚನೆಯ ಅಲ್ಲಮ ಕಥನ ಗ್ರಂಥ ಬಿಡುಗಡೆ
- ಅಂಕಿತ ಪುಸ್ತಕ ಪ್ರಕಾಶನದಿಂದ ಬಿಡುಗಡೆ
ಬೆಂಗಳೂರು: ಜ್ಞಾನ, ಅಧ್ಯಾತ್ಮ ಮತ್ತು ಮಾನವೀಯ ಮೌಲ್ಯಗಳ ಸಂಗಮದ ಶಕ್ತಿಯೇ ಅಲ್ಲಮಪ್ರಭು. ಅವರ ವಿಚಾರಗಳನ್ನು ಅರಿಯಬೇಕಾದರೆ ಅಧ್ಯಾತ್ಮದ ದೃಷ್ಟಕೋನದಿಂದ ಅಧ್ಯಯನ ನಡೆಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ರಚನೆಯ ಅಲ್ಲಮ ಕಥನ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅಲ್ಲಮ ಕಥನ ಗ್ರಂಥವು ಅಪಾರ ಶ್ರಮವಹಿಸಿ, ಸಂಶೋಧನೆ ಮತ್ತು ವಿಷಯ ಸಂಗ್ರಹ ಮಾಡಿ ಬರೆಯಲಾದ ಮಹತ್ವದ ಕೃತಿಯಾಗಿದೆ. ಕಾಲಾತೀತವಾಗಿ ಪ್ರಭಾವ ಬೀರುವ ಶಕ್ತಿ ಇದಕ್ಕಿದೆ. ನಮ್ಮ ಜ್ಞಾನವನ್ನು ಇತರರಿಗೆ ಹಂಚಿದಾಗ ಅದು ಬೆಳಕಾಗುತ್ತದೆ ಎನ್ನುವುದಕ್ಕೆ ಮಲ್ಲೇಪುರಂ ಅವರ ಕೃತಿ ಅನ್ವರ್ಥವಾಗಿದೆ ಎಂದರು.
ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಅಲ್ಲಮಪ್ರಭು ಅವರನ್ನು ಎಲ್ಲರಿಗೂ ಸರಳವಾಗಿ ಪರಿಚಯಿಸುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಗ್ರಂಥಗಳು ಗುರು ಸಮಾನವಾದ ಕೆಲಸ ಮಾಡುತ್ತವೆ. ಈ ಗ್ರಂಥ ಕೂಡ ಗುರು ಸಮಾನವಾಗಿ ಭವಿಷ್ಯಕ್ಕೆ ಬೆಳಕು ತರಬಲ್ಲದು ಎಂದು ಹೇಳಿದರು.
ಅಲ್ಲಮನ ಕುರಿತಾದ ಗ್ರಂಥವನ್ನು ರಚಿಸುವ 40 ವರ್ಷಗಳ ಕನಸು ಸಾಕಾರವಾಗಿದೆ. ಕಳೆದ 4 ವರ್ಷಗಳಿಂದ ವಿಜಯವಾಣಿ ಪತ್ರಿಕೆಯಲ್ಲಿ ಈ ಪುಸ್ತಕದ ಶೇ.70 ಭಾಗ ಪ್ರಕಟವಾಗಿದೆ. ಉಳಿದ ಹೆಚ್ಚುವರಿ ವಿಷಯಗಳನ್ನು ಸೇರಿಸಿ ಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಗ್ರಂಥ ರಚಿಸಿದ್ದೇನೆ.
ಕೃತಿಯ ವಿಷಯದ ಬಗ್ಗೆ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ವಿ. ವಸಂತಕುಮಾರ್, ಭಾರತೀಯ ಅಧ್ಯಾತ್ಮದ ಕಥನ, ಯಾನ ಮತ್ತು ಅನುಭಾವ ಸೇರಿ ಅಲ್ಲಮ ಕಥನವಾಗಿದೆ. ಸಮಾಜವನ್ನು ಭೇದಗಳ ನೆಲೆಯಲ್ಲಿ ಒಡೆಯಲು ಪ್ರಯತ್ನಿಸುತ್ತಿರುವಾಗ, ನಿಜಸಾರವನ್ನು ಈ ಕೃತಿ ಸಾರುತ್ತದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಉಪಸ್ಥಿತರಿದ್ದರು.
ಅಲ್ಲಮ ಪುರಸ್ಕಾರ: ಜಮಖಂಡಿಯ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಆರಂಭಿಸಿರುವ ಅಲ್ಲಮ ಪುರಸ್ಕಾರವನ್ನು ಪ್ರಕಾಶ ಗಿರಿಮಲ್ಲನವರ, ಡಾ. ವೀಣಾ ಬನ್ನಂಜೆ, ಡಾ. ನೀಲಗಿರಿ ತಳವಾರ, ಡಾ.ಟಿ.ಎನ್. ವಾಸುದೇವಮೂರ್ತಿ ಮತ್ತು ಅವರಿಗೆ ಪ್ರದಾನ ಮಾಡಲಾಯಿತು.
ಸಂವಿಧಾನದಿಂದ ದೇಶದಲ್ಲಿ ಏಕತೆ
ದೇಶದಲ್ಲಿ ಹಲವು ವೈವಿಧ್ಯ, ವೈರುಧ್ಯಗಳಿದ್ದರೂ ಎಲ್ಲರನ್ನೂ ಒಂದುಗೂಡಿಸಿರುವುದು ಸಂವಿಧಾನವೆಂಬ ಶಕ್ತಿ. ನಾನು ಹಣದ ಬೆನ್ನು ಹತ್ತಿಲ್ಲ. ಆದರೆ, ಹಣ ನನ್ನ ಬೆನ್ನು ಹತ್ತಿದೆ. ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಆಶಯದಿಂದ ರಾಜಕೀಯಕ್ಕೆ ಬಂದಿದ್ದೇನೆ. ಪ್ರಸಕ್ತ ವರ್ಷ ಆರಂಭಿಸಿರುವ "ಅಲ್ಲಮ ಪುರಸ್ಕಾರ'ವನ್ನು ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗುವುದಾಗಿ ಜಮಖಂಡಿ ಶಾಸಕ ಜಗದೀಶ ಶಿವಯ್ಯ ಗುಡಗುಂಟಿ ತಿಳಿಸಿದರು.