High court 
ರಾಜ್ಯ

ಸಾಲದ ನೆಪ ಹೇಳಿ ಜೀವನಾಂಶ ತಪ್ಪಿಸುವಂತಿಲ್ಲ| High court

ಬೆಂಗಳೂರು: ಬ್ಯಾಂಕ್​ ಸಾಲದ ಕಂತು ಕಟ್ಟುವುದಿದೆ ಎಂಬ ಕಾರಣವನ್ನು ನೆಪವಾಗಿಟ್ಟುಕೊಂಡು ಕೌಟುಂಬಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆಸ್ತಿ ಗಳಿಸುವ ಮೊದಲು ಹೆಂಡತಿ- ಮಕ್ಕಳ ಅಗತ್ಯಗಳನ್ನು ಪೂರೈಸುವುದು ಪತಿಯ ಕರ್ತವ್ಯ ಎಂದು ಹೈಕೋರ್ಟ್​ ಹೇಳಿದೆ.


ಹೆಂಡತಿ ಮತ್ತು ಅಪ್ರಾಪ್ತ ಮಗನಿಗೆ 15 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ರೈಲ್ವೆ ಇಲಾಖೆ ನೌಕರನೊಬ್ಬ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಡಾ. ಚಿಲ್ಲಕ್ಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದು, 64,550 ರೂ. ವೇತನವಿದೆ. ಇದರಲ್ಲಿ ಬಹುಪಾಲು ಗೃಹಸಾಲದ ಕಂತಿಗೆ ಹೋಗುವುದರಿಂದ 25 ಸಾವಿರ ರೂ. ಮಾತ್ರ ಉಳಿಯುತ್ತದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ 15 ಸಾವಿರ ರೂ. ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಹೆಂಡತಿಯು ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದ ಕಾರಣ ತನ್ನೊಂದಿಗೆ ದೈಹಿಕ ಬಂಧಕ್ಕೆ ನಿರಾಕರಿಸಿದ್ದಾಳೆ. ಆಕೆ, ಉದ್ಯೋಗ ಮಾಡುತ್ತಿದ್ದು, 15 ಸಾವಿರ ರೂ. ವೇತನ ಪಡೆಯುತ್ತಿದ್ದಾಳೆ. ಅಲ್ಲದೆ, ಮಗುವಿನ ಜೈವಿಕ ತಾಯಿಯೂ ಆಕೆಯಲ್ಲ. ಮಗುವಿನ ಶೈಕ್ಷಣಿಕ ಮತ್ತು ಆರ್ಥಿಕ ಅಗತ್ಯಗಳನ್ನು ಪೂರೈಸಲು ತಾನು ಸಿದ್ಧನಿದ್ದು, ಪತ್ನಿಗೆ ಅದನ್ನು ಪಾವತಿಸಲಾಗದು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಅಕ್ಕನ ಮಗುವಿಗೆ ಸಾಕುತಾಯಿ:

ಅರ್ಜಿದಾರರ ಮೊದಲ ಹೆಂಡತಿ ಗಂಡು ಮಗುವಿನ ಹೆರಿಗೆ ನಂತರ ಮೃತಪಟ್ಟಿದ್ದರು. ಬಳಿಕ ಕುಟುಂಬದ ಹಿರಿಯರ ಸಮ್ಮತಿಯಂತೆ ಅರ್ಜಿದಾರರು ಪತ್ನಿಯ ತಂಗಿಯನ್ನು 2014ರಲ್ಲಿ ವಿವಾಹವಾಗಿದ್ದರು. ದಂಪತಿ 2017ರವರೆಗೆ ಒಟ್ಟಿಗೆ ಬಾಳಿದ ನಂತರ ಮನಸ್ತಾಪಗಳಿಂದಾಗಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ಪ್ರತ್ಯೇಕವಾದರೂ, ಅಕ್ಕನ ಮಗುವನ್ನು ಎರಡನೇ ಹೆಂಡತಿಯು ತಮ್ಮ ಬಳಿ ಇಟ್ಟುಕೊಂಡು ಬೆಳೆಸುತ್ತಿದ್ದಾರೆ.

ℹ️

ಪತಿಯ ಆರೋಪಕ್ಕೆ ಸಾಕ್ಷ್ಯಗಳಿಲ್ಲ 

ಅರ್ಜಿದಾರರ ವಾದ ನಿರಾಕರಿಸಿರುವ ನ್ಯಾಯಪೀಠ, ಎರಡನೇ ಹೆಂಡತಿಯು ಮಗುವಿನ ಹೆತ್ತ ತಾಯಿ ಅಲ್ಲದಿದ್ದರೂ ಆ ಮಗುವನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ. ಅವರಿಗೆ ಬೇರೊಬ್ಬರ ಜೊತೆ ಸಂಬಂಧವಿತ್ತು ಹಾಗೂ ದಾಂಪತ್ಯ ಜೀವನಕ್ಕೆ ಸಹಕರಿಸಲಿಲ್ಲ ಎಂಬ ಪತಿಯ ಆರೋಪಗಳಿಗೆ ಪುರಾವೆಗಳಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.