ಮದ್ಯವರ್ಜನ ಶಿಬಿರಗಳು 
ರಾಜ್ಯ

ವ್ಯಸನಮುಕ್ತ ಸಮಾಜಕ್ಕೆ ಮದ್ಯವರ್ಜನ ಶಿಬಿರ ಸಹಕಾರಿ / NELAMANGAL

ನೆಲಮಂಗಲ : ಮದ್ಯವ್ಯಸನಿಗಳನ್ನು ವ್ಯಸನ ಮುಕ್ತಗೊಳಿಸಿ ಕುಟುಂಬದೊಂದಿಗೆ ನವಜೀವನ ನಡೆಸುವಂತೆ ಮಾಡಲು ಮದ್ಯವರ್ಜನ ಶಿಬಿರಗಳು ಸಹಾಯಕವಾಗಿವೆ ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಹೇಳಿದರು.
ನಗರದ ಶ್ರೀ ವೀರಭದ್ರೇಶ್ವರ ಪ್ರಾಥನಾ ಮಂದಿರ ಕವಾಡಿ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್​ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್​ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಹಾಳಾಗಿವೆ. ಕೊಲೆ ಮತ್ತು ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆರ್ಥಿಕ ಪರಿಸ್ಥಿತಿ ಹಾಳು ಮಾಡುವ, ಸಾಮಾಜಿಕ ಸ್ಥಿತಿಗತಿ ಹದಗೆಡಿಸುವ, ಶಾಂತಿ-ನೆಮ್ಮದಿ ಕಸಿಯುವ ಮದ್ಯಪಾನದಿಂದ ಎಲ್ಲರೂ ದೂರವಿರಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಉಮಾರಬ್ಬ ಮಾತನಾಡಿ, ಈ ಸಂಸ್ಥೆಯು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಉದ್ದೇಶ ಹೊಂದಿದೆ. ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ಮದ್ಯವರ್ಜನ ಶಿಬಿರ ಪವಿತ್ರ ಕಾರ್ಯಕ್ರಮವಾಗಿದ್ದು, ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮ ಅಲ್ಲ, ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ ಎಂದು ಹೇಳಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮಂಜುನಾಥ್​, ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್​, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್​ ಯೋಜನಾಧಿಕಾರಿ ಸುಜಾತಾ ಶೆಟ್ಟಿ, ಮೇಲ್ವಿಚಾರಕ ರಾಜೇಗೌಡ, ನಗರಸಭೆ ಪೌರಾಯುಕ್ತ ಗಂಗಾಧರ್​, ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಜಿ.ಉಮೇಶ್​ಗೌಡ, ಬಿಜೆಪಿ ಮಹಿಳಾಮೋರ್ಚಾ ಅಧ್ಯಕ್ಷ ಮಂಜುಳಾಸುರೇಶ್​, ಪ್ರಧಾನ ಕಾರ್ಯದರ್ಶಿ ಶೀಲಾ, ಮುಖಂಡ ದಯಾಶಂಕರ್​, ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಬೈಲಮೂರ್ತಿ, ಸರೋಜಾ ಜಯರಾಂ, ಭಾಗ್ಯಾ ರಂಗಸ್ವಾಮಿ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ನಿರೀಕ್ಷಕಿ ಜಯಲಕ್ಷಿ$್ಮ, ಸಿಬ್ಬಂದಿ ದರ್ಶನ್​ ಇದ್ದರು.