ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯ ನೀರಾವರಿ ಕಾಲುವೆಯಲ್ಲಿ ಹೂಳು, ಕಲ್ಲು ಹಾಗೂ ಗಿಡಗಂಟಿಗಳಿಂದ ಅವ್ಯವಸ್ಥೆಗೊಂಡಿರುವ ಎಎಲ್‌ಬಿಸಿ (ಡಿಸ್ಟ್ರಿಬ್ಯೂಟರ್-39) ನೀರಾವರಿ ಕಾಲುವೆಯನ್ನು ರೈತರು ಪರಿಶೀಲಿಸಿದರು. ಮಲ್ಲಪ್ಪ ಮಾಲಿನ, ಅಂಬರೀಶ ನಾಲತವಾಡ, ಸಿದ್ಧಪ್ಪ ಗುರಿಕಾರ, ಸಿದ್ಧಪ್ಪ ಚಲವಾದಿ ಇತರರಿದ್ದರು.
- ಚವನಭಾವಿ ರೈತರಿಗೆ ಜೀವ ಜಲಕ್ಕೆ ಸಂಕಷ್ಟ
- ಕೂಡಲೇ ಸ್ವಚ್ಛಗೊಳಿಸಿ ನೀರು ಹರಿಸುವಂತೆ ಆಗ್ರಹ
ತಾಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನೀರು ಪೂರೈಸುವ ಎಎಲ್‌ಬಿಸಿ ಕಾಲುವೆ (ಡಿಸ್ಟ್ರಿಬ್ಯೂಟರ್-39) ನಿರ್ವಹಣೆ ಕೊರತೆಯಿಂದ ಸಂಪೂರ್ಣ ಅವ್ಯವಸ್ಥೆಗೊಂಡಿದ್ದು, ಕಾಲುವೆಯಲ್ಲಿ ಹೂಳು, ಕಸ, ಕಲ್ಲುಗಳು ಹಾಗೂ ಮುಳ್ಳಿನ ಗಿಡ ಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯದಂತಾಗಿದೆ ಎಂದು ರೈತರು ಆರೋಪಿಸಿದರು.
ತಾಲೂಕಿನ ನಾಲತವಾಡ, ಅರೇಶಂಕರ, ಕಮಲಾಪುರ, ಎಣ್ಣಿವಡಗೇರಿ ಮಾರ್ಗವಾಗಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ನೀರು ಪೂರೈಸುವ ಈ ನೀರಾವರಿ ಕಾಲುವೆಯ ಹಲವು ಭಾಗಗಳಲ್ಲಿ ಮಣ್ಣು, ಸಣ್ಣ-ದೊಡ್ಡ ಕಲ್ಲುಗಳು ಮತ್ತು ಹುಲ್ಲು ಬೆಳೆದು ನಿಂತಿದ್ದು, ಗಿಡ ಗಂಟಿಗಳು ಸಂಗ್ರಹಗೊಂಡಿವೆ. ಸುಮಾರು ಐದು ವರ್ಷಗಳಿಂದ ಕಾಲುವೆಯ ಹೂಳು ಎತ್ತುವ ಕಾರ್ಯ ನಡೆದಿಲ್ಲ ಎಂದು ರೈತರು ದೂರಿದರು.
ಪ್ರಸ್ತುತ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಅಲ್ಪ ಸ್ವಲ್ಪ ಬೆಳೆಗಳನ್ನು ಬೆಳೆದಿದ್ದು, ಅವುಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರದ ಆದೇಶದಂತೆ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ, ಹೂಳು ಹಾಗೂ ಗಿಡ ಗಂಟಿಗಳಿಂದಾಗಿ ನೀರು ಚವನಭಾವಿ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಆತಂಕ ರೈತರಲ್ಲಿ ಎದುರಾಗಿದೆ. ಕಾಲುವೆ ನೀರನ್ನೇ ಅವಲಂಬಿಸಿರುವ ಜಾನುವಾರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಾವರಿ ಕಾಲುವೆ ಸಮರ್ಪಕವಾಗಿ ನಿರ್ವಹಿಸದೆ ರೈತರ ಸಂಕಷ್ಟಕ್ಕೆ ಕಾರಣವಾಗಿರುವ ಕೆಬಿಜೆಎನ್‌ಎಲ್ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾಲುವೆಯಲ್ಲಿರುವ ಹೂಳು, ಕಸ, ಕಲ್ಲು ಹಾಗೂ ಗಿಡ ಗಂಟಿ ತೆರವುಗೊಳಿಸಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಕೆಬಿಜೆಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು. ಹಣಮಂತ ಗೋಗಿ, ಲಕ್ಷ್ಮಣ ಈಳಗೇರ, ಶಿವಪ್ಪ ಕಾರಕೂರ, ಹಣಮಂತ ನಾಲತವಾಡ, ಯಮನಪ್ಪ ಬಿರಾದಾರ, ಸಂಗಪ್ಪ ಕುಂಬಾರ, ಗದ್ದೆಪ್ಪ ನಾಲತವಾಡ, ಲಕ್ಕಪ್ಪ ನಾಲತವಾಡ, ಮೌನೇಶ ಬಿರಾದಾರ ರೈತರು ಇದ್ದರು.
ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯ ನೀರಾವರಿ ಕಾಲುವೆಯಲ್ಲಿ ಹುಲ್ಲುನ ಬೆಳೆದಿರುವುದು.