Akshayapatre's 81st kitchen in Belluti 
ರಾಜ್ಯ

ಬೆಳ್ಳೂಟಿಯಲ್ಲಿ ಅಕ್ಷಯಪಾತ್ರೆ 81ನೇ ಅಡುಗೆಮನೆ

ಶಿಡ್ಲಘಟ್ಟ: ಆರೋಗ್ಯಯುತ ಬದುಕು ನಮ್ಮೆದಾಗಬೇಕಾದರೇ ಪೌಷ್ಟಿಕ ಆಹಾರ, ಹಣ್ಣು&ಹಂಪಲು, ತರಕಾರಿ ಸೇವನೆ, ದೈಹಿಕ ಚಟುವಟಿಕೆ ಮುಖ್ಯ ಎಂದು ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್​ ಸಲಹೆ ನೀಡಿದರು.
ಬೆಳ್ಳೂಟಿ ಗೇಟ್​ ಬಳಿ ದಿ.ಎನ್​.ವಿ.ಕೃಷ್ಣಮೂರ್ತಿರಾವ್​ ಮತ್ತು ದಿ.ಎನ್​.ಆರ್​.ಪದ್ಮಾವತಮ್ಮ ಸ್ಮರಣಾರ್ಥ ಇನ್ಫೊಸಿಸ್​ನ ಸುಧಾಮೂರ್ತಿ, ನಾರಾಯಣಮೂರ್ತಿ ನೆರವಿನಿಂದ ನಿರ್ಮಿಸಿದ 81ನೇ ಅಕ್ಷಯ ಪಾತ್ರೆ ಅಡುಗೆಮನೆ ಉದ್ಘಾಟಿಸಿ ಮಾತನಾಡಿದರು.
ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗೇಟ್​ ಬಳಿ ಅಕ್ಷಯ ಪಾತ್ರೆ ಅಡುಗೆಮನೆ ಉದ್ಘಾಟಿಸಿ ಮಕ್ಕಳಿಗೆ ಊಟ ಬಡಿಸಲಾಯಿತು.
ತಾಲೂಕಿನ 50 ಸರ್ಕಾರಿ ಶಾಲೆಗಳ 2350 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್​ ಸಂಸ್ಥೆಯಿಂದ ತಯಾರಿಸಿ ವಿತರಿಸಲಾಗುವುದು. ಆಧುನಿತ ಯಂತ್ರಗಳ ಬಳಕೆ ಮಾಡಿ, ಸ್ವಚ್ಛತೆ ನೈರ್ಮಲ್ಯ ಕಾಪಾಡಿಕೊಂಡು ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಸಲಾಗುವುದು. ಅಡುಗೆ ಮಾಡಲು ಸುಧಾರಿತ ಬೃಹತ್​ ಯಂತ್ರೋಪಕರಣ ಅಳವಡಿಸಿರುವುದರಿಂದ ಎಲ್ಲವೂ ಯಂತ್ರಗಳ ಮೂಲಕವೇ ನಡೆಯುತ್ತಿರುವುದು ನೋಡಬಹುದು. ಸಾಕಷ್ಟು ಜನರಿಗೆ ಇಸ್ಕಾನ್​ನ ಸೇವಾ ಕಾರ್ಯದ ಬಗ್ಗೆ, ಅನುದಾನದ ಬಗ್ಗೆ ಸಾಕಷ್ಟು ಗೊಂದಲಗಳಿದ್ದು, ಇಸ್ಕಾನ್​ಗೆ ಸರ್ಕಾರದಿಂದ ಸಿಗುವುದಕ್ಕಿಂತ ಸಂಘ&ಸಂಸ್ಥೆಗಳು, ದಾನಿಗಳು ಹೆಚ್ಚಿನ ನೆರವು ನೀಡುತ್ತಿದ್ದಾರೆ. ಸಂಸ್ಥೆ ಲಾಭದ ಉದ್ದೇಶದಿಂದಲ್ಲದೆ ಸೇವಾ ಮನೋಭಾವದಿಂದ ಕಾರ್ಯಗಳನ್ನು ನಡೆಸುತ್ತಿದೆ ಎಂದರು.
"

5,000 ಮಕ್ಕಳಿಗೆ ಸಿಗಲಿದೆ ಬಿಸಿಯೂಟ

ಬೆಂಗಳೂರಿನಲ್ಲಿ 2000ನೇ ಇಸವಿಯಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಅಕ್ಷಯಪಾತ್ರೆ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಚಳವಳಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ ದೇಶದ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಸ್ಥೆ ಸಕ್ರಿಯವಾಗಿದ್ದು, 25,000ಕ್ಕೂ ಹೆಚ್ಚು ಶಾಲೆ, ಅಂಗನವಾಡಿಗಳ ಒಟ್ಟು 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಪ್ರಸಿದ್ಧ ಲಾಭ ರಹಿತ ಸಂಸ್ಥೆ ಅಕ್ಷಯಪಾತ್ರೆ ಫೌಂಡೇಶನ್​, ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿಯಲ್ಲಿ ತನ್ನ ಹೊಸ ಅತ್ಯಾಧುನಿಕ ಕೇಂದ್ರೀಕೃತ ಅಡುಗೆ ಮನೆ ಲೋಕಾರ್ಪಣೆಗೊಳಿಸಿದೆ. ಇದು ದೇಶಾದ್ಯಂತ ಅಕ್ಷಯಪಾತ್ರೆ ಸಂಸ್ಥೆ ಆರಂಭಿಸಿರುವ 81ನೇ ಅಡುಗೆ ಮನೆಯಾಗಿದ್ದು, ಸಂಸ್ಥೆಯ ಬೆಳ್ಳಿಹಬ್ಬದ ವರ್ಷದಲ್ಲೇ ಘಟಕ ಉದ್ಘಾಟನೆಗೊಂಡಿರುವುದು ವಿಶೇಷವಾಗಿದೆ. ಶಿಡ್ಲಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 5,000ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಶುಚಿ-, ರುಚಿಯಾದ ಪೌಷ್ಟಿಕ ಬಿಸಿಯೂಟ ಉಣಬಡಿಸಲು ಸಜ್ಜಾಗಿದೆ.

ಜಿಪಂ ಸಿಇಒ ಡಾ.ವೈ.ನವೀನ್​ ಭಟ್​ ಮಾತನಾಡಿ, ಇಸ್ಕಾನ್​ ದೇವಾಲಯದ ಅಕ್ಷಯ ಪಾತ್ರೆ ಸಂಸ್ಥೆಯು 81ನೇ ಅಡುಗೆ ಮನೆ ನಿರ್ಮಿಸಿದ್ದು, ಕೇಂದ್ರ ಸರ್ಕಾರದ ಪಿಎಂ ಪೋಷಣ್​ ಯೋಜನೆಯಡಿ ವಿಕಸಿತ ಭಾರತಕ್ಕಾಗಿ ಪೌಷ್ಟಿಕ ಆಹಾರ ಎಂಬ ಆಶಯದೊಂದಿಗೆ ಪ್ರಾರಂಭಿಸಲಾಗಿದೆ. ತಾಲೂಕಿನ 50 ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಮೂಲಕ ಹಸಿವು ನೀಗಿಸುವ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.
ಅಡುಗೆ ಮನೆ, ದಾಸ್ತಾನು ಕೊಠಡಿ, ತರಕಾರಿ, ದವಸ&ಧಾನ್ಯಗಳನ್ನು ಶುಚಿಗೊಳಿಸುವ ವಿಧಾನ, ಸ್ವಚ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳುವ ಬಗೆಯನ್ನು ಶಾಸಕರು, ಅಧಿಕಾರಿಗಳು ವೀಕ್ಷಿಸಿದರು. ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್​ ವಿತರಿಸಲಾಯಿತು.
ಜಿಲ್ಲಾಧಿಕಾರಿ ಜಿ.ಪ್ರಭು, ಅಕ್ಷಯ ಪಾತ್ರೆಯ ಸಹ ಸಂಸ್ಥಾಪಕರು, ಉಪಾಧ್ಯಕ್ಷ ಶ್ರೀ ಚಂಚಲಪತಿ ಪ್ರಭು, ಶ್ರೀ ಗುಣಾಕರ್​ ರಾಮ್​ಪ್ರಭು, ತಾಪಂ ಇಒ ಆರ್​. ಹೇಮಾವತಿ, ತಹಸೀಲ್ದಾರ್​ ಗಗನಸಿಂಧು, ಪೌರಾಯುಕ್ತೆ ಅಮೃತಾ ಗೌಡ, ಆನೂರು ಗ್ರಾಪಂ ಪಿಡಿಒ ಕಾತ್ಯಾಯಿನಿ ಇದ್ದರು.