ಚಿತ್ರ ೦೬ ಕೆ.ಎಲ್.ಆರ್. ೦೩ : ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸುಕ್ರಿವಾಲ್ ಅಕ್ಕಪಡೆ ವಾಹನಕ್ಕೆ ಚಾಲನೆ ನೀಡಿದರು. ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಗದೀಶ್ ಮತ್ತು ರವಿಶಂಕರ್ ಮುಂತಾದವರು ಇದ್ದರು.
ರಾಜ್ಯದಲ್ಲಿ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಾರಿಗೆ ತಂದಿರುವ "ಅಕ್ಕಪಡೆ ಯೋಜನೆ"ಗೆ ಜಿಲ್ಲಾ ಪೊಲೀಸ್ ವರಿ಼ಷ್ಠಾಧಿಕಾರಿ ಹಾಗೂ ಅಕ್ಕಪಡೆ ಯೋಜನೆಯ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಕನ್ನಿಕಾ ಸುಕ್ರಿವಾಲ್ ಸೋಮವಾರ ಸಂಜೆ ತಮ್ಮ ಕಚೇರಿಯಲ್ಲಿ ಚಾಲನೆ ನೀಡಿದರು.
ಅಕ್ಕಪಡೆ ಮಹಿಳಾ ಗೃಹ ರಕ್ಷಕಿಯರನ್ನು ಒಳಗೊಂಡು ರಚನೆಯಾಗಿದ್ದು, ಸದರಿ ಪಡೆಯು ಶಾಲಾ-ಕಾಲೇಜು, ಮಹಿಳಾ ಹಾಸ್ಟೆಲ್, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ, ಶೈಕ್ಷಣಿಕ ಸ್ಥಳಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ಮಾಡುವುದು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ಮತ್ತು ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂಧಿಸುತ್ತದೆ. ಅಲ್ಲದೆ ಪೊಕ್ಸೋ ಬಾಲ್ಯವಿವಾಹ ಹಾಗೂ ೧೦೯೮ ಮಕ್ಕಳ ಸಹಾಯವಾಣಿ, ೧೮೧ ಮಹಿಳಾ ಸಹಾಯವಾಣಿ ಹಾಗೂ ೧೧೨ ತುರ್ತು ಸೇವೆಯ ಬಗ್ಗೆ ಸಹ ಜಾಗೃತಿ ಮೂಡಿಸುತ್ತದೆ ಎಂದು ಎಸ್.ಪಿ ಕನ್ನಿಕಾ ಸುಕ್ರಿವಾಲ್ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಗದೀಶ್ ಮತ್ತು ರವಿಶಂಕರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ, ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯ ಸದಸ್ಯರುಗಳು, ಪೊಲೀಸ್ ಅಧಿಕಾರಿಗಳು, ಮಹಿಳಾ ಗೃಹ ರಕ್ಷಕ ಅಕ್ಕಪಡೆ, ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಉಪ ನಿರ್ದೇಶಕರ ಕಛೇರಿಯ ಸಿಬ್ಬಂದಿ ಹಾಜರಿದ್ದರು.