ಕಲಬುರಗಿಯ ಬಿದ್ದಾಪುರ ಕಾಲನಿ ಅಂಬಾ ಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಗಾನಲೋಕದ ಗಂಧರ್ವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಸದಾನಂದ ಪೆರ್ಲ, ಸೂರ್ಯಕಾಂತ ಫುಲಾರಿ, ಅಂಬರೀಷ ಹೂಗಾರ್, ರುದ್ರಪ್ಪ ನರಗುಂದ, ಡಿ.ಎಂ.ಪಾಟೀಲ್ ಇತರರಿದ್ದರು.
- ಡಾ.ಸದಾನಂದ ಪೆರ್ಲ ಅಭಿಮತ
- ಜಿ.ಬಿ ಮಂಗಳಗಟ್ಟಿ ಸಂಸ್ಮರಣ ಪ್ರಶಸ್ತಿ ಪ್ರದಾನ
ಕಲಬುರಗಿ: ಆಕಾಶವಾಣಿಯು ಶಾಸ್ತ್ರೀಯ ಜಾನಪದ ಹಾಗೂ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ. ಸಂಗೀತ ಪರಂಪರೆ ಉಳಿಸಿ, ಕಲಾವಿದರನ್ನು ಬೆಳೆಸಲು ಕಾರಣವಾಗಿದೆ ಎಂದು ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಹೇಳಿದರು.
ಬಿದ್ದಾಪುರ ಕಾಲನಿ ಅಂಬಾ ಭವಾನಿ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂಜ್ಯ ಪಂಚಾರಿ ಗವಾಯಿಗಳ 82ನೇ ಮತ್ತು ಪಂಡಿತ ಪುಟ್ಟರಾಜ ಗವಾಯಿಗಳ 16ನೇ ಪುಣ್ಯ ಸ್ಮರಣೋತ್ಸವ, ಸಂಗೀತ ಸಂಜೆ ಹಾಗೂ ಆಕಾಶವಾಣಿಯ ಜಿ.ಬಿ ಮಂಗಳಗಟ್ಟಿ ಸ್ಮರಣಾರ್ಥ ಐವರು ಸಂಗೀತ ಸಾಧಕರಿಗೆ ಗಾನಲೋಕದ ಗಂಧರ್ವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಯನಾಡಿದರು.
ಹಿಂದುಸ್ತಾನಿ, ಜಾನಪದ, ಸುಗಮ ಸಂಗೀತ ರಂಗದಲ್ಲಿ ನೂರಾರು ಕಲಾವಿದರನ್ನು ಹೊಂದಿದ್ದು, ಎಲ್ಲ ಕಲಾವಿದರು ಕೀಳರಿಮೆ ಬಿಟ್ಟು ಅವಕಾಶಗಳನ್ನು ಬಳಸಿ ಸಾಧನೆ ಮಾಡಲು ಪರಿಶ್ರಮ ಪಡಬೇಕು. ಜಿ.ಬಿ.ಮಂಗಳಗಟ್ಟಿ ಅವರು ಆಕಾಶವಾಣಿಯಲ್ಲಿ ಅಧಿಕಾರಿಯಾಗಿ 40 ವರ್ಷ ಸೇವೆ ಸಲ್ಲಿಸಿ, ಕಲಾವಿದರಿಗೆ ಪ್ರೋತ್ಸಾಹ ನೀಡಿ ಬೆಳಸಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಪ್ರತಿವರ್ಷ ನೀಡುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಹೂಗಾರ ಸಮಾಜದ ಮುಖಂಡ ಸೂರ್ಯಕಾಂತ ಫುಲಾರಿ ಅಧ್ಯತೆ ವಹಿಸಿದ್ದರು. ಕಲ್ಮೇಶ್ವರ ಸಂಗೀತ ಸಾಹಿತ್ಯ ಸಂಘದ ಅಧ್ಯಕ್ಷ ಅಂಬರೀಶ ಹೂಗಾರ, ಪತ್ರಕರ್ತ ಡಿ.ಎಂ.ಪಾಟೀಲ್, ರುದ್ರಪ್ಪ ನರಗುಂದ, ಬಸಯ್ಯ ನಂದಿಕೋಲು, ಚಂದ್ರಕಾಂತ ಹೂಗಾರ ತ್ತರಗಿ, ಜಯಧೃತ ಶೃಂಗೇರಿ, ಅಶೋಕ ಹೂಗಾರ, ಭೀಮಾಶಂಕರ ಮುಗಳಿ, ರೇವಣಸಿದ್ದಪ್ಪ ಹೂಗಾರ, ಇಂದಿರಾ, ಲಕ್ಷ್ಮೀಪುತ್ರ ಪದಕಿ, ವಿಜಯಕುಮಾರ ಸಾಲಿಮಠ ಇತರರಿದ್ದರು.
ಹಿಂದುಸ್ತಾನಿ ಕಲಾವಿದರಾದ ರೇವಯ್ಯ ಸ್ವಾಮಿ ವಸದಮಠ, ರಮೇಶ ಕುಲಕರ್ಣಿ, ಶಿವಲಿಂಗಯ್ಯ ಸ್ವಾಮಿ ಚಿಣಮಗೇರಿ, ಜಾನಪದ ಕಲಾವಿದರಾದ ಬಾಬುರಾವ ಕೋಬಾಳ, ಹನುಮಂತ ಸಿ. ಅವರಿಗೆ ಗಾನಲೋಕದ ಗಂಧರ್ವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಕುಮಾರ ಶಾಸ್ತ್ರೀಗಳು, ವಿಶ್ವನಾಥಮಠ ಧುತ್ತರಗಾಂವ್ ನಿರೂಪಣೆ ಮಾಡಿದರು. ಪ್ರೇರಣಾ ನರಗುಂದ ಪ್ರಾರ್ಥಿಸಿದರು. ಆಕಾಶವಾಣಿಯ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನೆರವೇರಿತು.