ಅಜಿತ್ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರು 
ರಾಜ್ಯ

ಡಿ.4ಕ್ಕೆ ಅಜಿತ್ ಕುಮಾರ್ ಸ್ಮಾರಕ ಪ್ರಶಸ್ತಿ ಪ್ರದಾನ

ನೃತ್ಯ, ಸಂಗೀತ, ರಂಗಭೂಮಿ, ಯೋಗ ಸಾಧಕರಿಗೆ ಗೌರವ

ಬೆಂಗಳೂರು : ನೃತ್ಯ, ಸಂಗೀತ, ರಂಗಭೂಮಿ ಹಾಗೂ ಯೋಗ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಿರಿಯ ಕಲಾವಿದರು ಮತ್ತು ಸಾಧಕರಿಗೆ ಅಜಿತ್ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ಪ್ರಶಸ್ತಿ ಪ್ರಕಟವಾಗಿದೆ.

ನೃತ್ಯ, ಸಂಗೀತ, ರಂಗಭೂಮಿ ಮತ್ತು ಯೋಗ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.

ರಾಷ್ಟ್ರೀಯ ಮಟ್ಟದ ಅಜಿತಶ್ರೀ ಪುರಸ್ಕಾರ ನಾಟಕ ವಿಭಾಗದಲ್ಲಿ ಹಿರಿಯ ರಂಗಕರ್ಮಿ ಕೆ.ವಿ.ಶ್ರೀನಿವಾಸ ಪ್ರಭು, ಸಂಗೀತ ವಿಭಾಗದಲ್ಲಿ ಗರ್ತಿಕೆರೆ ರಾಘವೇಂದ್ರ, ನೃತ್ಯ ವಿಭಾಗದಲ್ಲಿ ವಿದುಷಿ ಅಂಬಳೆ ರಾಜೇಶ್ವರಿ ಆಯ್ಕೆಯಾಗಿದ್ದು 50 ಸಾವಿರ ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.

ನಾಟ್ಯಶ್ರೀ ಪುರಸ್ಕೃತರಲ್ಲಿ ಕ್ರಮವಾಗಿ ಶಶಿಧರ ನರೇಂದ್ರ, ಹೆಚ್.ಎಸ್.ಸುಧೀಂದ್ರ, ವಿದುಷಿ ವಿದ್ಯಾ ರವಿಶಂಕರ್ ಆಯ್ಕೆಯಾಗಿದ್ದು, 20 ಸಾವಿರ ನಗದು, ಬೆಳ್ಳಿಪದಕವನ್ನು ಒಳಗೊಂಡಿದೆ. ಯೋಗಶ್ರೀ ಪ್ರಶಸ್ತಿಗೆ ಡಾ.ರಾಘವೇಂದ್ರ ಗುರೂಜಿ ಆಯ್ಕೆಯಾಗಿದ್ದು 10 ಸಾವಿರ ನಗದು ಮತ್ತು ಬೆಳ್ಳಿ ಪದಕ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲರ್ ಸಭಾಂಗಣದಲ್ಲಿ ಡಿ.4ರಂದು ಸಂಜೆ 5.30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಮಾಜಿ ಸಚಿವ ಡಾ. ಪಿ.ಜಿ.ಆರ್. ಸಿಂಧ್ಯ ಭಾಗವಹಿಸಲಿದ್ದಾರೆ.