- ಬಳ್ಳಾರಿಯಿಂದ 19 ಕಿ.ಮೀ. ದೂರದಲ್ಲಿ ಜಾಗವನ್ನು ಗುರುತಿಸಲಾಗಿದೆ.
- ವಿಮಾನ ನಿಲ್ದಾಣ ಕಟ್ಟುವಾಗಲೇ ದೂರದೃಷ್ಟಿ ಇರಬೇಕು.
- ಬೆಳಗಾವಿ ಮತ್ತು ಹುಬ್ಬಳ್ಳಿ ಏರ್ಪೋರ್ಟ್ ಮಧ್ಯೆ ಕೇವಲ 70 ಕಿ.ಮೀ. ಅಂತರವಿದೆ.
ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಿಗೆ ಅನುಕೂಲ
ಶೀಘ್ರವೇ ಸಿಎಂ ಅಧ್ಯಕ್ಷತೆಯಲ್ಲಿ ಸಭೆ: ಎಂ.ಬಿ. ಪಾಟೀಲ
ಬಳ್ಳಾರಿ, ಹೊಸಪೇಟೆ, ಹಂಪಿ, ಆನೆಗೊಂದಿ, ಸಂಡೂರು, ಕೊಪ್ಪಳ, ಕುರುಗೋಡು, ಸಿರಗುಪ್ಪ ಮುಂತಾದ ಭಾಗಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ ಆಗಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದು, ಈ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ವಿಧಾನಸಭೆಗೆ ತಿಳಿಸಿದರು.
ಗಂಗಾವತಿಯ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಬಳ್ಳಾರಿಯಿಂದ 19 ಕಿ.ಮೀ. ದೂರದಲ್ಲಿ ಜಾಗವನ್ನು ಗುರುತಿಸಲಾಗಿದೆ. ಇದು ಕಾರ್ಯಸಾಧು ಎನಿಸಿದರೆ ಎಲ್ಲ ಜನಪ್ರತಿನಿಧಿಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ನೀವು ಉದ್ದೇಶಿರುವ ಜಾಗ ಬಳ್ಳಾರಿ ಏರ್ಪೋರ್ಟ್‌ನಿಂದ ನೆರೆಯ ಆಂಧ್ರಪ್ರದೇಶಕ್ಕೂ ಲಾಭವಾಗಲಿದೆ. ಈ ಯೋಜನೆಯ ಸಂಬಂಧ ಸದ್ಯದಲ್ಲೇ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.
ಈಗ ಹೊಸದಾಗಿ ಗುರುತಿಸಿರುವ ಸ್ಥಳದಿಂದ ಹೊಸಪೇಟೆಗೆ 33 ಕಿ.ಮೀ., ಹಂಪೆಗೆ 26 ಕಿ.ಮೀ, ಸಂಡೂರಿಗೆ 33 ಕಿ.ಮೀ, ಕೊಪ್ಪಳಕ್ಕೆ 75 ಕಿ.ಮೀ, ಕುರುಗೋಡಿಗೆ 14 ಕಿ.ಮೀ, ತೋರಣಗಲ್ಲಿಗೆ 13 ಕಿ.ಮೀ ಮತ್ತು ಸಿರಗುಪ್ಪಕ್ಕೆ 43 ಕಿ.ಮೀ ಆಗಲಿದೆ. ಆದರೆ ಈಗ ಗುರುತಿಸಿರುವ ಜಾಗವು ವಿಮಾನ ನಿಲ್ದಾಣಕ್ಕೆ ಎಷ್ಟರ ಮಟ್ಟಿಗೆ ಸೂಕ್ತ ಎನ್ನುವುದನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತೀರ್ಮಾನಿಸಬೇಕು ಎಂದು ವಿವರಿಸಿದರು.
ವಿಮಾನ ನಿಲ್ದಾಣ ಕಟ್ಟುವಾಗಲೇ ದೂರದೃಷ್ಟಿ ಇರಬೇಕು. ಇಲ್ಲದೆ ಹೋದರೆ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಇಲ್ಲೆಲ್ಲ ಆಗಿರುವ ತಪ್ಪುಗಳೇ ಮುಂದುವರಿಯುತ್ತವೆ. ಬೆಳಗಾವಿ ಮತ್ತು ಹುಬ್ಬಳ್ಳಿ ಏರ್ಪೋರ್ಟ್ ಮಧ್ಯೆ ಕೇವಲ 70 ಕಿ.ಮೀ. ಅಂತರವಿದೆ. ಇವೆರಡೂ ಜಿಲ್ಲೆಗಳಿಗೆ ಅನುಕೂಲವಾಗುವ ಹಾಗೆ ಮಧ್ಯದಲ್ಲಿ ನಿಲ್ದಾಣ ನಿರ್ಮಿಸಿದ್ದರೆ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸುತ್ತಿದ್ದರು. ಬೆಳಗಾವಿಯಲ್ಲಿ ಭಾರತೀಯ ವಾಯುಪಡೆ ಇರುವುದು ನಮ್ಮ ಪ್ರಯೋಜನಕ್ಕೆ ಬಂದಿದೆ ಎಂದು ವಾಸ್ತವವನ್ನು ತೆರೆದಿಟ್ಟರು.
ವಿಜಯಪುರದಲ್ಲೂ ಇದೇ ತಪ್ಪಾಗಿದೆ. ಈಗ ಉದ್ಘಾಟನೆಗೆ ಸಜ್ಜಾಗಿರುವ ಏರ್ಪೋರ್ಟ್ ಕಲಬುರಗಿ ರಸ್ತೆಯಲ್ಲಿದೆ. ಅದರ ಬದಲು ಆಲಮಟ್ಟಿ ಕಡೆಗೆ ಮಾಡಿದ್ದರೆ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬಾಗಲಕೋಟೆ ಮುಂತಾದ ಸ್ಥಳಗಳಿಗೆ ಪ್ರಯೋಜನ ಸಿಗುತ್ತಿತ್ತು. ಏರ್ಪೋರ್ಟ್ ಕಟ್ಟಿದ ಮೇಲೆ ಅದು ಸ್ತಬ್ಧವಾದರೆ ಪ್ರಯೋಜನವೇನು? ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಕೆಐಎಡಿಬಿ ವತಿಯಿಂದ 800 ಮತ್ತು 1,200 ಎಕರೆ ಇರುವ ಎರಡು ಹೊಸ ತಾಣಗಳನ್ನು ನೋಡಲಾಗಿದೆ ಎಂದರು.
ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಕೇಂದ್ರಗಳಲ್ಲಿ ಇರುವ ವಿಮಾನ ನಿಲ್ದಾಣಗಳು ಇಡೀ ದೇಶದಲ್ಲಿ ತೊಂದರೆ ಎದುರಿಸುತ್ತಿವೆ. ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳು ಇಂಥ ದುರವಸ್ಥೆ ಎದುರಿಸುತ್ತಿವೆ ಎಂದರು.
ಬೀದರ್ ವಿಮಾನನಿಲ್ದಾಣ ಸದ್ಯಕ್ಕೆ ಕೆ ಕೆ ಆರ್ ಡಿ ಬಿ ನೆರವಿನಿಂದ ನಡೆಯುವಂತಾಗಿದೆ. ಅದೇ ರೀತಿ ಕಲ್ಬುರ್ಗಿ ವಿಮಾನ ನಿಲ್ದಾಣ ಕೂಡ ಕಾರ್ಯಾಚರಣೆ ಮಾಡಬೇಕೆನ್ನುವ ಬೇಡಿಕೆ ಬಂದಿದ್ದು, ಅದನ್ನು ಮಾಡುತ್ತೇವೆ. ಹೀಗಾಗಿ ಉಡಾನ್ ಯೋಜನೆಯನ್ನು 3ರಿಂದ 5 ವರ್ಷಗಳಿಗೆ ವಿಸ್ತರಿಸಬೇಕೆಂದು ಮತ್ತು ನಂತರದ ಐದು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರಕಾರಗಳು 50:50 ಅನುಪಾತದಲ್ಲಿ ನಿರ್ವಹಿಸಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಪ್ರಸ್ತಾವನೆ ಸಲ್ಲಸಲಾಗಿದೆ ಎಂದರು.
ಹಿಂದೆ ಗುರುತಿಸಿದ್ದ ತಾಣದಲ್ಲಿ ವಿಮಾನ ನಿಲ್ದಾಣ ಮಾಡಿದರೆ 8 ಪಥಗಳ ಗ್ರೀನ್-ಫೀಲ್ಡ್ ಹೆದ್ದಾರಿ ನಿರ್ಮಾಣ ಇತ್ಯಾದಿ ಪ್ರಶ್ನೆ ಬರುತ್ತದೆ. ಅದಕ್ಕೆ ಭೂಸ್ವಾಧೀನ, ಪರಿಹಾರ ಎಲ್ಲ ಸೇರಿ ವಿಮಾನ ನಿಲ್ದಾಣಕ್ಕೆ ಹಾಕಿದಷ್ಟು ಹಣವನ್ನೇ ಸುರಿಯಬೇಕಾಗುತ್ತದೆ. ಆದ್ದರಿಂದ ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದರು.
*ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಕೇಂದ್ರಗಳಲ್ಲಿ ಇರುವ ವಿಮಾನ ನಿಲ್ದಾಣಗಳು ಇಡೀ ದೇಶದಲ್ಲಿ ತೊಂದರೆ ಎದುರಿಸುತ್ತಿವೆ. ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳು ಇಂಥ ದುರವಸ್ಥೆ ಎದುರಿಸುತ್ತಿವೆ
-ಎಂ ಬಿ ಪಾಟೀಲ, ಮೂಲಸೌಕರ್ಯ ಅಭಿವೃದ್ಧಿ ಸಚಿವ