ದೇವನಹಳ್ಳಿ ತಾಲೂಕಿನ ರಾಮನಾಥಪುರ ಹಾಲು ಉತ್ಪಾದಕರ ಸಹಕಾರ ಸಂದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಮುಲ್ ನಿರ್ದೇಶಕ ಸಾವಕನಹಳ್ಳಿ ಎಸ್.ಪಿ.ಮುನಿರಾಜು, ರಾಮನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ ಕುಮಾರ್, ಅಂತಾರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ.ಶಾಂತಕುಮಾರ್ ಇದ್ದರು.
ಕುಂದಾಣ : ಕೆಲ ದಿನಗಳಿಂದ ಇಂಡಿಗೋ ವಿಮಾನ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಗೆ ಕೇಂದ್ರ ಸರ್ಕಾರ ಹೊಣೆ ಹೊರಬೇಕು ಎಂದು ದೇವನಹಳ್ಳಿ ಬಮುಲ್ ನಿರ್ದೇಶಕ ಸಾವಕನಹಳ್ಳಿ ಎಸ್.ಪಿ.ಮುನಿರಾಜು ಹೇಳಿದರು.
ದೇವನಹಳ್ಳಿ ತಾಲೂಕಿನ ರಾಮನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ 500 ಕಿ.ಮೀಗೆ 7,500 ರೂಪಾಯಿಯಂತೆ ಟಿಕೆಟ್ ಭರಿಸುವ ವ್ಯವಸ್ಥೆ ಇತ್ತು. ಇದೀಗ ಪ್ರಯಾಣದ ವೆಚ್ಚ ಶೇ.64ನಂತೆ 18,000 ವರೆಗೆ ಏರಿಸಿದ್ದು, ವಿಮಾನ ಪ್ರಯಾಣಿಕರು ದೇಶದಾದ್ಯಂತ ಕೇಂದ್ರವನ್ನು ಖಂಡಿಸುತ್ತಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅವಲಂಬಿತ ರೈತರ ಅಗತ್ಯಕ್ಕೆ ಬರುವ ಚಾಪ್ ಕಟರ್, ಮ್ಯಾಟ್, ಗೊಬ್ಬರ ಸೇರಿ ಕೃಷಿ ಉಪಯೋಗಿ ಸಾಧನ ಸಲಕರಣೆಗಳನ್ನು ಬೆಂಗಳೂರು ಹಾಲು ಒಕ್ಕೂಟದಿಂದ ಒದಗಿಸುತ್ತಿದೆ. ದೇವನಹಳ್ಳಿ ತಾಲೂಕಿನ ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳು ಶೇ.80 ಪ್ರಗತಿಯಾಗಿವೆ. ಉಳಿದ ಡೇರಿಗಳಿಗೆ ಕಾಂಗ್ರೆಸ್ ಹೆಚ್ಚಿನ ಅನುದಾನ ನೀಡಲು ಶ್ರಮಿಸಲಿದೆ ಎಂದರು.
ರಾಮನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ ಕುಮಾರ್ ಮಾತನಾಡಿ, ಧರ್ಮಸ್ಥಳ, ಕೆಎಂಎಫ್ ಹಾಗೂ ಡೇರಿ ಹೂಡಿಕೆ ಹಣ ಸೇರಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ಷೀರಭವನ ನಿರ್ಮಿಸಲು ಡೇರಿ ಸರ್ವ ಸದಸ್ಯರ ಸಹಕಾರ ದೊರೆತಿರುವುದು ಪ್ರಶಂಸನೀಯ ಎಂದರು.
ಹೈನುಗಾರಿಕೆಯಿಂದ ಲಾಭ : ಹೈನುಗಾರಿಕೆಯಿಂದ ರೈತರ ಆರ್ಥಿಕ ಪ್ರಗತಿ ಸಾಧ್ಯ. ಕುಂದಾಣ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳ ನಡುವೆಯೂ ಜಾನುವಾರುಗಳಿಗೆ ಹಸಿ ಮೇವಿನ ಸಮಸ್ಯೆ ಎದುರಾದರೂ, ಹಾಲು ಉತ್ಪಾದಕರ ಜಮೀನಿನಲ್ಲೇ ಹಸಿ ಮೇವು ಬೆಳೆಸಿಕೊಳ್ಳುವ ಮೂಲಕ ರಾಮನಾಥಪುರದ ಡೇರಿಯಲ್ಲಿ ಪ್ರತಿದಿನ 600 ಲೀಟರ್ ಹಾಲು ಶೇಖರಿಸಿ ಬೆಂಗಳೂರು ಡೇರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ.ಶಾಂತಕುಮಾರ್ ಹೇಳಿದರು.