ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ತಾಲೂಕು ಏಮ್ಸ್ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಪ್ರಮುಖರಾದ ಗೋವಿಂದ ನಾಯಕ, ವಿಜಯಕುಮಾರ ಪೋಳ, ಡಾ.ಶಿವಬಸಪ್ಪ ಹೆಸರೂರು, ಮಾದೇಶ ಸರ್ಜಾಪುರ, ಅಮರೇಶಪ್ಪ ಹೂನೂರು ಇತರರಿದ್ದರು.
ಲಿಂಗಸುಗೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಆಗ್ರಹಿಸಿ ತಾಲೂಕು ಏಮ್ಸ್ ಹೋರಾಟ ಸಮಿತಿಯು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಸಲ್ಲಿಸಿತು.
ಏಮ್ಸ್ ಮಂಜೂರು ಮಾಡುವಂತೆ ಜಿಲ್ಲಾ ಹೋರಾಟ ಸಮಿತಿಯಿಂದ ರಾಯಚೂರಿನಲ್ಲಿ ಧರಣಿ ನಡೆಸುತ್ತಿದ್ದು ಈಗ 1500 ದಿನಗಳು ಕಳೆದಿವೆ. ಆದಾಗ್ಯೂ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ರಾಯಚೂರ ಜಿಲ್ಲೆ ತೀರಾ ಹಿಂದುಳಿದ ಪ್ರದೇಶವಾಗಿದೆ.
ವೈದ್ಯಕೀಯ ತಂತ್ರಜ್ಞಾನಗಳ ಕೊರತೆಯಿಂದ ಜನರು ನೂರಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಪೌಷ್ಟಿಕತೆ ಹೆಚ್ಚಿ ತಾಯಿ ಮತ್ತು ಮಗು ಮರಣ ಪ್ರಮಾಣವೂ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಏಮ್ಸ್ ಸ್ಥಾಪಿಸುವುದರಿಂದ ಪ್ರಾದೇಶಿಕ ಅಸಮಾನತೆಗೆ ಪರಿಹಾರ ಮತ್ತು ಜನರ ಆರೋಗ್ಯ ಮತ್ತು ಜೀವಗಳನ್ನು ರಕ್ಷಿಸಲು ಸಹಾಯವಾಗುತ್ತದೆ. ಆದ್ದರಿಂದ ಕೂಡಲೇ ರಾಯಚೂರಿಗೆ ಏಮ್ಸ್ ಘೋಷಿಸಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಕೆಆರ್‌ಎಸ್ ಅಧ್ಯಕ್ಷ ವಿಜಯಕುಮಾರ ಪೋಳ, ಬಸವಪ್ರಭು ಆಸ್ಪತ್ರೆ ಮುಖ್ಯಸ್ಥ ಡಾ.ಶಿವಬಸಪ್ಪ ಹೆಸರೂರು, ಕರವೇ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮರೇಶಪ್ಪ ಹೂನೂರು, ಅದ್ವಿಕಾ ನರ್ಸಿಂಗ್ ಕಾಲೇಜು ಮುಖ್ಯಸ್ಥೆ ಅಂಬಿಕಾ ವಟಗಲ್, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪಾಟೀಲ್, ಡಿ.ಬಿ ಸೋಮನಮರಡಿ, ನಾಗರೆಡ್ಡಿ ನಗನೂರು, ಮಹ್ಮದ್ ರಫಿ, ಅಮರೇಶ ಗುಂಡಸಾಗರ ಇತರರಿದ್ದರು.