ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
- 1ರಿಂದ 5 ಕಿ.ಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನ
- ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಶಾಲೆಗೆ ಆರು ಕಿಮೀ ವ್ಯಾಪ್ತಿಯ 7 ಶಾಲೆಗಳ ವಿಲೀನಗೊಳಿಸಲು ಸರ್ಕಾರ ಆದೇಶ
ಬೆಂಗಳೂರು: ಕೆಪಿಎಸ್ ಹಾಗೂ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸುತ್ತಲಿನ ಶಾಲೆಗಳ ವಿಲೀನದೊಂದಿಗೆ ಸರ್ಕಾರಿ ಶಾಲೆಗಳಿಗೆ ಕಂಟಕ ತಂದೊಡ್ಡಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಖಂಡಿಸಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಸರ್ಕಾರದ ಆದೇಶದ ಪ್ರಕಾರ, 800 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ, ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1ರಿಂದ 5 ಕಿ.ಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ. ಈ ಹೆಸರಿನಲ್ಲಿ ಆ ಶಾಲೆಗಳನ್ನು ಮುಚ್ಚಲಾಗುತ್ತದೆ. ಈಗ ಸ್ಥಾಪಿಸಲಾಗುತ್ತಿರುವ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಮಾಗ್ನೆಟ್ ಶಾಲೆಗೆ, ಹೊಂಗನೂರಿನ ಆರು ಕಿಮೀ ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಉಪಾಧ್ಯಾಯರು ಮತ್ತು ಪರಿಕರಗಳ ಸಮೇತ ವಿಲೀನಗೊಳಿಸಲು ಸರ್ಕಾರವು ಆದೇಶ ಹೊರಡಿಸಿರುವುದು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿ 110ಕ್ಕೂ ಅಧಿಕ ಸಂಖ್ಯೆಯ ದಾಖಲಾತಿ ಹೊಂದಿರುವ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಖಂಡನೀಯ ಎಂದರು.
ಕೆಪಿಎಸ್ ಶಾಲೆಗಳನ್ನು ತೆರೆಯುವುದಕ್ಕೆ ನಮ್ಮವಿರೋಧವಿಲ್ಲ. ಆದರೆ, ಗ್ರಾಮ ಪಂಚಾಯಿತಿಗೆ ಮಾತ್ರ ಒಂದು ಶಾಲೆಗಳನ್ನು ತೆರೆಯುವುದನ್ನು ನಾವು ವಿರೋಧಿಸುತ್ತೇವೆ. ಯಾಕೆಂದರೆ, ಕರ್ನಾಟಕದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿದೆ. ಆದರೆ, ಪಂಚಾಯಿತಿಗೊಂದು ಕೆಪಿಎಸ್ ತೆರೆದರೆ 5,900 ಶಾಲೆಗಳು ಮಾತ್ರ ಉಳಿಯಲಿವೆ. ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾಸ್ತವತೆ ಹೀಗಿರುವಾಗ, 6-7 ಕಿಮೀ ದೂರದ ಶಾಲೆಯ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ ಎಂಬ ಆತಂಕ ವ್ಯಕ್ತಪಡಿಸಿದರು.
ಈ ಯೋಜನೆಗೆ ಸರ್ಕಾರವು ಈಗಾಗಲೇ 2,500 ಕೋಟಿ ರೂ. ಸಾಲ ಪಡೆದಿದೆ. ಕಾರ್ಪೊರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಇದನ್ನು ವಿರೋಧಿಸಿ ರಾಜ್ಯದಲ್ಲಿ ಬಲಿಷ್ಠ ಹೋರಾಟ ಕಟ್ಟುವುದು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ-ಪ್ರೇಮಿ ಜನತೆಯ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಅಭಯಾ ದಿವಾಕರ್, ಚಂದ್ರಕಲಾ ಸೇರಿ ಹಲವರು ಉಪಸ್ಥಿತರಿದ್ದರು.