AIDS is not a fatal disease. 
ರಾಜ್ಯ

ಏಡ್ಸ್​ ಮಾರಕ ರೋಗವಲ್ಲ

ತಿಪಟೂರು: ಕೆಲ ಅಡೆತಡೆಗಳು ನಿವಾರಣೆ ಆದರೆ ಎಚ್​ಐವಿ ನಿಯಂತ್ರಣ ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್​ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್​ರಿಬ್ಬನ್​ ಕ್ಲಬ್​ ಮತ್ತು ಎನ್​ಎಸ್​ಎಸ್​ ಘಟಕಗಳಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್​ ದಿನಾಚರಣೆಯಲ್ಲಿ ಮಾತನಾಡಿದ ಅವರು, ಏಡ್ಸ್​ ರೋಗವು ಮಾರಕ ರೋಗವಲ್ಲ. ಆದರೆ ಕೆಲ ವಿಧಾನಗಳನ್ನು ಅನುಸರಿಸುವುದರಿಂದ ಮಾರಕ ರೋಗವೆಂದೇ ಕರೆಯಲಾಗುವ ಇದನ್ನು ತಡೆಗಟ್ಟಬಹುದು ಎಂದರು.
ಉದಾಹರಣೆಗೆ ಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದ ಸೂಜಿಯನ್ನು ಬಳಸದೇ ಇರುವುದು, ಸೋಂಕಿತ ವ್ಯಕ್ತಿಯಿಂದ ರಕ್ತ ಪಡೆಯದೇ ಇರುವುದು ಮತ್ತು ಯಾವುದೇ ಕಾರಣಕ್ಕೂ ಎಚ್​ಐವಿ ಸೋಂಕಿತ ಪಾಲಕರಿಂದ ಮಗುವಿಗೆ ರೋಗ ಹರಡದಂತೆ ಎಚ್ಚರ ವಹಿಸಿದರೆ ಈ ಮಾರಕ ರೋಗವನ್ನು ತೊಲಗಿಸಬಹುದು ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಟಿ.ಎಸ್​ ಉಮೇಶ್​ ಮಾತನಾಡಿ, ಎಚ್​ಐವಿ ರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಮುಖ್ಯವಾಗಿದೆ. ವಿವಾಹ ಆಗುವವರೆಗೂ ಬ್ರಹ್ಮಚಯೆರ್ ಪಾಲನೆ, ರೋಗ ಬಂದವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದರೆ ರೋಗ ಹರಡುವುದಿಲ್ಲ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ರೋಗ ಹರಡುವುದಿಲ್ಲ. ಆಗ ಮಾತ್ರ ಇದನ್ನು ಶೂನ್ಯಕ್ಕೆ ತರಬಹುದು. ಇದರಲ್ಲಿ ಯುವಕರ ಸಹಕಾರ, ಅರಿವು ಮತ್ತು ಜವಾಬ್ದಾರಿ ಬಹಳ ಮುಖ್ಯ ಎಂದರು.
ರೆಡ್​ರಿಬ್ಬನ್​ ಕ್ಲಬ್​ ಸಂಚಾಲಕ ಪ್ರೊ.ಕೆ.ನಾಗರಾಜು ಮಾತನಾಡಿ, ವಿದ್ಯಾರ್ಥಿಗಳು ಏಡ್ಸ್​ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಈ ಮೂಲಕ ತಮ್ಮ, ತಮ್ಮ ಊರು, ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಏಡ್ಸ್​ ಹರಡುವ ಬಗ್ಗೆ ಅರಿವು ಮೂಡಿಸಿ ರೋಗ ನಿಯಂತ್ರಣದಲ್ಲಿ ಮಹತ್ವದ ಜವಾಬ್ದಾರಿ ವಹಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಎಚ್​.ಸಿ. ಶಶಿಕುಮಾರ್​ ಮಾತನಾಡಿ, ಎಚ್​ಐವಿ ಮತ್ತು ಏಡ್ಸ್​ ರೋಗದಿಂದ ಬಳಲಿದವರಿಗೆ ಸಾಂತ್ವನ ಮತ್ತು ಧೈರ್ಯ ತುಂಬುವುದು ಅತ್ಯಗತ್ಯ, ನಾವೆಲ್ಲರೂ ಈ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.