ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಬೀದಿ ನಾಟಕ ಗಮನ ಸೆಳೆಯಿತು.
- ತಾಲೂಕು ಏಡ್ಸ್ ನಿಯಂತ್ರಣ ಘಟಕದ ಆಪ್ತ ಸಮಾಲೋಚಕ ಮಹೇಶ್
- ಎಚ್‌ಐವಿ ನಿಯಂತ್ರಣ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನ್ ಬಗ್ಗೆ ಜೀವನ ಜೋಪಾನ ಎಂಬ ಶೀರ್ಷಿಕೆ
ಯಳಂದೂರು: ಏಡ್ಸ್ ನಿಯಂತ್ರಣ ಕುರಿತು ಹೊಸದಾಗಿ ಕ್ಯೂಆರ್ ಕೋಡ್ ಬಿಡುಗಡೆ ಮಾಡಲಾಗಿದ್ದು, ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ ಇದರ ಪುಟ ತೆರೆಯಲಿದೆ ಎಂದು ತಾಲೂಕು ಏಡ್ಸ್ ನಿಯಂತ್ರಣ ಘಟಕದ ಆಪ್ತ ಸಮಾಲೋಚಕ ಮಹೇಶ್ ಹೇಳಿದರು.
ಎಚ್‌ಐವಿ ನಿಯಂತ್ರಣ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನ್ ಬಗ್ಗೆ ಜೀವನ ಜೋಪಾನ ಎಂಬ ಶೀರ್ಷಿಕೆಯಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೆಎಸ್‌ಪಿಎಸ್ ಹಾಗೂ ರಂಗದೇಗುಲ ಕಲಾ ವೇದಿಕೆ ವತಿಯಿಂದ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು. ಕ್ಯೂಆರ್ ಕೋಡ್‌ನಲ್ಲಿ ಕೆಲವು ಪ್ರಶ್ನೆಗಳಿದ್ದು, ಅದಕ್ಕೆ ಉತ್ತರ ನೀಡಿದರೆ ನಮಗೆ ಏಡ್ಸ್‌ನ ಅಪಾಯ ಇದೆಯೇ ಇಲ್ಲವೆ ಎಂದು ಗೊತ್ತಾಗುತ್ತದೆ ಎಂದರು.
ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಗುಪ್ತವಾಗಿ ಇಡಲಾಗುತ್ತದೆ. ರೋಗದ ಬಗ್ಗೆ ಗೊತ್ತಾದ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶವಿದ್ದು, ಎಚ್‌ಐವಿ ವೈರಸ್ ಪತ್ತೆ ಮಾಡಿ ಇದಕ್ಕೆ ಚಿಕಿತ್ಸೆ ಪಡೆಯಬಹುದು. ಇದು ಸಂಪೂರ್ಣ ಉಚಿತವಾಗಿರುತ್ತದೆ. ಕೆಲವರು ಮುಜುಗರದಿಂದ ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಹಾಗಾಗಿ ಇದು ಸಹಾಯವಾಗಲಿದೆ. ಇದರ ಬಗ್ಗೆ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಪಂಚಾಯಿತಿ ಕಚೇರಿ ಸೇರಿದಂತೆ ಭಿತ್ತಿ ಚಿತ್ರಗಳನ್ನು ಅಂಟಿಸುವ ಮೂಲಕ ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ರಂಗದೇಗುಲ ಕಲಾತಂಡದ ಅಧ್ಯಕ್ಷ ಶಾಂತರಾಜು, ಮಹದೇವಪ್ರಭು, ರವಿ, ಸಿದ್ಧರಾಜು, ಶಿವಣ್ಣ, ಗೀತಾ, ಭಾಗ್ಯ, ರೂಪೇಶ ಗ್ರಾಪಂ ಬಿಲ್ ಕಲೆಕ್ಟರ್ ಕಿಟ್ಟಿ, ಆಶಾ ಕಾರ್ಯಕರ್ತೆಯರು ಇದ್ದರು.