DK Shivakumar | ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಅವರು ಘೋಷಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಮಾತನಾಡಿದರು.
ಎಐ-ನೇಟಿವ್ ರಾಜ್ಯವನ್ನಾಗಿ ಕರ್ನಾಟಕದ ಪರಿವರ್ತನೆ
ಕರ್ನಾಟಕವನ್ನು ಎಐ-ನೇಟಿವ್ ರಾಜ್ಯವನ್ನಾಗಿ ರೂಪಿಸುವುದು ಹಾಗೂ ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ನಿಕಟ ಸಹಯೋಗ ಬೆಳೆಸಲು ಈ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದರು.
ಮುಂದುವರಿದು ಮಾತನಾಡಿದ ಸಿಎಂ ಡಿಕೆಶಿ, ಎಐ-ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ ಹಾಗೂ ರೈತರಿಗೆ ಎಐ-ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಾಗುವುದು. ಜೊತೆಗೆ ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು ಹಾಗೂ ಎಐ ಪರಿಕರಗಳನ್ನು ಬಳಸಿಕೊಂಡು ಸಣ್ಣ ಉದ್ಯಮಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಾಗುವುದು ಎಂದರು.
ತಂತ್ರಜ್ಞಾನ ಬೆಂಗಳೂರಿನ ದೈನಂದಿನ ಭಾಗ
ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ. ಪ್ರತೀ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ. ಹಿಂದೆ ಸ್ಟೀಮ್ ಇಂಜಿನ್, ವಿದ್ಯುತ್, ಇಂಟರ್ನೆಟ್ ಮತ್ತು ಮೊಬೈಲ್ ತಂತ್ರಜ್ಞಾನಗಳು ಕ್ರಾಂತಿ ಸೃಷ್ಟಿಸಿದ್ದವು. ಇಂದು, ಕೃತಕ ಬುದ್ಧಿಮತ್ತೆಯು (AI) ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ ಎಂದು ಸಿಎಂ ಬಣ್ಣಿಸಿದರು.
ಇಂದು ನಮ್ಮ ರಾಜ್ಯವು ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ಶೇ. 40 ರಷ್ಟು ಕೊಡುಗೆ ನೀಡುತ್ತಿದೆ. ಬೆಂಗಳೂರು 17,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದ್ದು, ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿವೆ ಎಂದು ವಿವರಿಸಿದರು.
ಸಂಚಾರ ದಟ್ಟಣೆ ಸಮಸ್ಯೆಗೆ ಎಐ ಪರಿಹಾರ
ಕಳೆದ ಎರಡು ದಶಕಗಳಿಂದ ಗೂಗಲ್ ಸಂಸ್ಥೆಯು ಬೆಂಗಳೂರನ್ನು ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ. ಭಾರತದಲ್ಲಿ ಗೂಗಲ್ ಹೊಂದಿರುವ 18 ಸಾವಿರ ಸಿಬ್ಬಂದಿಯಲ್ಲಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಗೂಗಲ್ ಜೊತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಇದೇ ವೇಳೆ ನಗರದ ಪ್ರಮುಖ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ ಸಿಎಂ ಡಿಕೆಶಿ, ಎಐ ತಂತ್ರಜ್ಞಾನದ ಸಹಾಯದಿಂದ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಪರಿಹಾರ ಹುಡುಕುತ್ತಿದ್ದೇವೆ. 25 ವರ್ಷಗಳ ಹಿಂದೆ 70 ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ ಇಂದು 1.40 ಕೋಟಿಗೆ ಏರಿಕೆಯಾಗಿದೆ. ನಾವೆಲ್ಲರೂ ಜತೆಗೂಡಿ ಕೆಲಸ ಮಾಡುವ ಮೂಲಕ ಕರ್ನಾಟಕ ಹಾಗೂ ದೇಶದ ಪ್ರಗತಿಗೆ ಶ್ರಮಿಸೋಣ. ಕರ್ನಾಟಕ ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.