ಲಿಂಕ್ಡ್ ಇನ್- ಮೆಂಟರ್ ಟುಗೆದರ್ ಪಾಲುದಾರಿಕೆ 
ರಾಜ್ಯ

AI Job Trainging: ಲಿಂಕ್ಡ್ ಇನ್- ಮೆಂಟರ್ ಟುಗೆದರ್ ನಿಂದ 25 ಸಾವಿರ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ

ಪ್ರಮುಖ ಮುಖ್ಯಾಂಶಗಳು

  • ಯುವ ವೃತ್ತಿಪರರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ನೀಡಲು ಈ ಪಾಲುದಾರಿಕೆಯು ಕಾರ್ಯನಿರ್ವಹಿಸಲಿದೆ.
  • ಲಿಂಕ್ಡ್ ಇನ್ ಸಂಸ್ಥೆಯು ಈ ಯೋಜನೆಗಾಗಿ ಅಂದಾಜು 1.5 ಕೋಟಿ ರೂ. ಅನುದಾನವನ್ನು ಘೋಷಿಸಿದೆ.
  • ರಾಜ್ಯಾದ್ಯಂತ 25 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಅವರನ್ನು ಭವಿಷ್ಯದ ಎಐ ತಂತ್ರಜ್ಞಾನಕ್ಕೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಮಾರ್ಗದರ್ಶನ
ಬೆಂಗಳೂರು ವಿಶ್ವದ ಅತಿ ದೊಡ್ಡ ವೃತ್ತಿಪರ ನೆಟ್‌ವರ್ಕ್ ಸಂಸ್ಥೆಯಾದ ಲಿಂಕ್ಡ್ ಇನ್ ಸಂಸ್ಥೆಯು ಯುವಜನರಿಗೆ ವೃತ್ತಿ ಮಾರ್ಗದರ್ಶನ ನೀಡುವ ಪ್ರಮುಖ ಸಂಸ್ಥೆಯಾದ ಮೆಂಟರ್ ಟುಗೆದರ್ ಜತೆಗಿನ ಪಾಲುದಾರಿಕೆಯನ್ನು ಮುಂದುವರಿಸಿದೆ.
ಎಐ ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಸಾಂಪ್ರದಾಯಿಕ ಉದ್ಯೋಗ ಮಾರುಕಟ್ಟೆ ಮತ್ತು ವೃತ್ತಿಜೀವನದ ಹಾದಿಗಳು ವೇಗವಾಗಿ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವ ವೃತ್ತಿಪರರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ನೀಡಲು ಈ ಪಾಲುದಾರಿಕೆಯು ಕಾರ್ಯನಿರ್ವಹಿಸಲಿದೆ.
ಲಿಂಕ್ಡ್ ಇನ್ ಸಂಸ್ಥೆಯು ಈ ಯೋಜನೆಗಾಗಿ ಅಂದಾಜು 1.5 ಕೋಟಿ ರೂ. ಅನುದಾನವನ್ನು ಘೋಷಿಸಿದೆ. ಈ ಆರ್ಥಿಕ ನೆರವಿನೊಂದಿಗೆ ರಾಜ್ಯಾದ್ಯಂತ 25 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಅವರನ್ನು ಭವಿಷ್ಯದ ಎಐ ತಂತ್ರಜ್ಞಾನಕ್ಕೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಎರಡು ಸಂಸ್ಥೆಗಳ ನಡುವೆ ಕಳೆದ 7 ವರ್ಷಗಳಿಂದ ಯಶಸ್ವಿ ಸಹಭಾಗಿತ್ವ ಮುಂದುವರಿದುಕೊಂಡು ಬಂದಿದೆ. ಪ್ರಸ್ತುತ ಹೊಸ ಯೋಜನೆಯು, ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯೊಂದಿಗೆ ಅವರು ಹೊಂದಿರುವ ಸಹಯೋಗವನ್ನು ಮತ್ತಷ್ಟು ಬಲಪಡಿಸಲಿದ್ದು, ರಾಜ್ಯದ ಯುವ ಸಮುದಾಯಕ್ಕೆ ಆಧುನಿಕ ಕೌಶಲಗಳನ್ನು ತಲುಪಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.
ಕಳೆದ ಒಂದು ವರ್ಷದಲ್ಲಿ ಈ ಕಾರ್ಯಕ್ರಮವು ರಾಜ್ಯದ ಒಂಬತ್ತು ಜಿಲ್ಲೆಗಳ 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿದೆ. ಇದರ ಫಲವಾಗಿ ಶೇ.86ರಷ್ಟು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಗುರಿಯ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ.