ಎಐ ಚಾಲಿತ ನಿರ್ವಹಣೆ ಮತ್ತು ಸುಸ್ಥಿರ ವ್ಯವಹಾರ ಪರಿವರ್ತನೆ ಕುರಿತು ಬೆಂಗಳೂರು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಿವೃತ್ತ ಐಎಎಸ್ ಅಧಿಕಾರಿ ಡಾ.ಅಶೋಕ ದಳವಾಯಿ ಉದ್ಘಾಟಿಸಿದರು. ಐಐಬಿಎಸ್ ನಿರ್ದೇಶಕ ಡಾ.ತ್ರಿಪುರನೇನಿ ಜಗ್ಗಯ್ಯ, ಪ್ರೊ.ಜಾರ್ಜ್ಲೇಖಾ, ಮಾಜಿ ಕುಲಪತಿ ಡಾ.ಆರ್.ವೇಣುಗೋಪಾಲ್, ಬೆಂಗಳೂರು ಸಿಟಿ ವಿವಿ ಕುಲಪತಿ ಡಾ.ಬಿ.ರಮೇಶ್, ಡಾ.ಜಯಪ್ರಕಾಶ್ ಇತರರು ಇದ್ದರು.
ದೇವನಹಳ್ಳಿ : ಕೃತಕ ಬುದ್ಧಿಮತ್ತೆಯು ಶಿಕ್ಷಣ, ಕೈಗಾರಿಕೆ, ಉದ್ಯಮ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಆದರೆ ಮಾನವೀಯ ಮೌಲ್ಯಗಳೊಂದಿಗೆ ಎಐ ಬಳಕೆ ಅಗತ್ಯ. ಎಐ ಮಾನವನಿಗೆ ಪರ್ಯಾಯವಲ್ಲ, ಸಹಾಯಕ ಸಾಧನವಷ್ಟೇ ಎಂದು ನಿವೃತ್ತ ಐಎಎಸ್ ಡಾ.ಅಶೋಕ ದಳವಾಯಿ ಅಭಿಪ್ರಾಯಪಟ್ಟರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನ ವಿಭಾಗ ಹಾಗೂ ಐಐಬಿಎಸ್ ಕಾಲೇಜು ಮತ್ತು ಮೌಂಟ್ಕಾರ್ಮೆಲ್ ಸಹಯೋಗದಲ್ಲಿ ಎಐ ಚಾಲಿತ ನಿರ್ವಹಣೆ ಮತ್ತು ಸುಸ್ಥಿರ ವ್ಯವಹಾರ ಪರಿವರ್ತನೆ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು. ಮಲೇಷ್ಯಾದ ಪ್ರೊ.ಯೂಜಿನ್ಚೆಂಗ್- ಶಿಆವ್ ಮಾತನಾಡಿ, ಎಐ ಮಾರುಕಟ್ಟೆ ಗ್ರಾಹಕ ಸೇವೆ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶ ಸೃಷ್ಟಿಸುತ್ತಿದೆ ಎಂದರು.
ಐಐಬಿಎಸ್ ಬೆಂಗಳೂರು ಅಧ್ಯಕ್ಷ ಡಾ.ಜಯಪ್ರಕಾಶ್ ಮಾತನಾಡಿ, ಕೃತಕ ಬುದ್ಧಿಮತ್ತೆ ಭಾರತವನ್ನು ಸುಸ್ಥಿರ ಅಭಿವೃದ್ಧಿಯತ್ತ ಮುನ್ನಡೆಸುವ ಪ್ರಮುಖ ಶಕ್ತಿ. ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬಳಸಿದಾಗ ಮಾತ್ರ ಸಮಾಜ, ಶಿಕ್ಷಣ, ಕೈಗಾರಿಕೆ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗುಣಾತ್ಮಕ ಪರಿವರ್ತನೆ ಸಾಧ್ಯ. ಎಐ ಕೇವಲ ತಂತ್ರಜ್ಞಾನವಲ್ಲ, ನವೋದ್ಯಮ... ಉದ್ಯಮಶೀಲತೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಲ ನೀಡುವ ಸಾಧನ... ಭಾರತವು ಎಐ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸಾಧಿಸುವ ಅಪಾರ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.