ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ  
ರಾಜ್ಯ

ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಎ.ಐ.

ಪ್ರಮುಖ ಮುಖ್ಯಾಂಶಗಳು

  • * ಡಾ. ಬಿ.ಎಲ್. ಸುಜಾತಾ ರಾಥೋಡ್ ಹೇಳಿಕೆ
  • * ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಶುಶ್ರೂಷ ಕಾಲೇಜಿನಲ್ಲಿ ಪದವಿ ಪ್ರದಾನ
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದು ರೋಗನಿರ್ಣಯ, ಚಿಕಿತ್ಸೆ ಮತ್ತು ರೋಗಿಗಳ ಆರೈಕೆಯನ್ನು ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್ ತಿಳಿಸಿದ್ದಾರೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಶುಶ್ರೂಷ ಕಾಲೇಜು ವತಿಯಿಂದ ಇನ್ಫೋಸಿಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಡಿಜಿಟಲ್ ವಲಯದಲ್ಲಿ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಬದಲಾವಣೆಗೆ ಅನುಗುಣವಾಗಿ ತಾಂತ್ರಿಕ ಜ್ಞಾನ ವೃದ್ಧಿ ಅತ್ಯಗತ್ಯವಾಗಿದೆ. ವೈದ್ಯಕೀಯ ವಲಯದಲ್ಲಿ ಸಂಶೋಧನೆ ಹಾಗೂ ಕಲಿಕೆಗೆ ಆದ್ಯತೆ ನೀಡುವ ಮೂಲಕ ಉತ್ತಮ ಅವಕಾಶಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಗಿಗಳ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಶುಶ್ರೂಷಕರ ಪಾತ್ರ ದೊಡ್ಡದು. ಅತಿಶ್ರೇಷ್ಠವಾದ ಈ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸುವುದೇ ನಿಜವಾದ ದೇವರ ಪೂಜೆ. ವೃತ್ತಿಯನ್ನು ಬದ್ಧತೆ ಹಾಗೂ ನಿಷ್ಠೆಯಿಂದ ನಿರ್ವಹಿಸಬೇಕು. ರೋಗಿಗಳ ತ್ವರಿತ ಚೇತರಿಕೆಯಲ್ಲಿ ಶುಶ್ರೂಷಕರ ಪಾತ್ರ ಗಮನಾರ್ಹವಾಗಿದೆ ಎಂದು ಹೇಳಿದರು.
ಸಂಜಯ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ. ಮದನ್ ಬಲ್ಲಾಳ್ ಮಾತನಾಡಿ, ಯಾವುದೇ ಆಸ್ಪತ್ರೆ ಪ್ರಗತಿ ಹೊಂದಬೇಕಾದರೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದಲ್ಲಿ ಶುಶ್ರೂಷಕ ಸ್ಥಾನಕ್ಕೆ ಬೇಡಿಕೆ ಹೆಚ್ಚಿದೆ. ಈ ವೃತ್ತಿಯಲ್ಲಿ ಸವಾಲುಗಳು ಹೆಚ್ಚಾಗಿದ್ದರೂ ರೋಗಿಗಳಿಗೆ ನೀಡುವ ಆರೈಕೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.

ರೋಗಿಗಳ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಕಿದ್ವಾಯಿ ಆಸ್ಪತ್ರೆ ಮುಂಚೂಣಿಯಲ್ಲಿದ್ದು, ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶುಶ್ರೂಷಕರು ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ವೈದ್ಯಕೀಯ ವಲಯದಲ್ಲಿನ ಹೊಸ ಅಧ್ಯಯನಗಳತ್ತ ಗಮನ ಕೊಡಬೇಕು.

— -ಡಾ. ಟಿ. ನವೀನ್, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ