ಎಐ ಕ್ಯಾಮರಾದಲ್ಲಿ ಆನೆ ಸೆರೆ 
ರಾಜ್ಯ

ವನ್ಯಜೀವಿಗಳ ಮೇಲಿನ್ನು ಎಐ ಕ್ಯಾಮರಾಗಳ ನಿಗಾ!

ಬೆಂಗಳೂರು : ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿಗಳ (wildlife) ಸಂಘರ್ಷ ತಪ್ಪಿಸುವ ಪ್ರಯತ್ನಕ್ಕೆ ಕೃತಕ ಬುದ್ಧಿಮತ್ತೆ (ಎಐ) (AI cameras) ತಂತ್ರಜ್ಞಾನ ಬಳಸಲು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಪ್ರಾಣಿಗಳ ಚಲನವಲನಗಳನ್ನು ಗಮನಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಎಐ ಕ್ಯಾಮರಾ ಮತ್ತು ಕ್ಯಾಮರಾ ಟ್ರ್ಯಾಪ್ ಅಳವಡಿಸಿ ನಿಗಾ ವಹಿಸುವುದು, ಆ ಮೂಲಕ ಅರಣ್ಯ ಅಂಚಿನ ಪ್ರದೇಶಗಳಲ್ಲಿ ತಾತ್ಕಾಲಿಕ ಶಿಬಿರ ನಿರ್ಮಿಸಿ ಗಡಿರೇಖೆಗಳಲ್ಲಿ ಗಸ್ತು ಕಾರ್ಯ ನಿರ್ವಹಿಸುವುದು ಇಲಾಖೆಯ ಕಾರ್ಯತಂತ್ರವಾಗಿದೆ.
ವನ್ಯಜೀವಿಗಳ ಇರುವಿಕೆ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಿ, ಜಾಗರೂಕರಾಗಿರಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಗಸ್ತು ಸಿಬ್ಬಂದಿಗೆ ಸೂಚಿಸಲಾಗುತ್ತದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇರುವ ಅಥವಾ ತೊಡಗಿರುವ ವನ್ಯಜೀವಿಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆ ಹಿಡಿಯಲು ಎಐ ಕ್ಯಾಮರಾ ಬಳಸಲಾಗುತ್ತಿದೆ.
ಮಾನವ-ಆನೆ ಸಂಘರ್ಷ ಹೆಚ್ಚಿರುವ 10 ಜಿಲ್ಲೆಗಳಲ್ಲಿ ‘ಆನೆ ಎಲ್ಲಿ’ ಎಂಬ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯು ಸಾರ್ವಜನಿಕರ ದೂರುಗಳು, ಗಸ್ತು ತಿರುಗುವಿಕೆ ಮುಂದಾಗ ಮಾಹಿತಿಗಳ ಮೂಲಕ ನಿರ್ದಿಷ್ಟ ಪ್ರದೇಶದಲ್ಲಿ ಆನೆಗಳ ಚಲನವಲನದ ಮೇಲ್ವಿಚಾರಣೆ ಮಾಡುತ್ತದೆ.
ಆನಂತರ ಆನೆಗಳ ಚಲನವಲದ ಮಾದರಿ ಪತ್ತೆಹಚ್ಚಲು ಮತ್ತು ಸಾರ್ವಜನಿಕರಿಗೆ ಮೊದಲೇ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಸಹಾಯ ಮಾಡುತ್ತಿದೆ. ವಿವಿಧ ವಿಭಾಗದಿಂದ ಲಭ್ಯವಾಗುವ ಮಾಹಿತಿಯನ್ನು ರಿಯಲ್ ಟೈಮ್‌ನಲ್ಲಿ ಸಂಗ್ರಹಿಸಿ ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಕ್ಷೇತ್ರ ಮಟ್ಟದ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಸಂಯೋಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್(ಐಸಿಸಿಸಿ) ಹಾಗೂ 11 ವಿಭಾಗಗಳಲ್ಲಿ ವಿಭಾಗೀಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಡಿಸಿಸಿಸಿ) ಸ್ಥಾಪಿಸಲಾಗಿದೆ.
ಈ ಸೆಂಟರ್‌ನಲ್ಲಿ ದಿನದ 24 ಗಂಟೆಗಳ ಕಾಲ ಅರಣ್ಯ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದು, ಎಐ ಕ್ಯಾಮರಾದಿಂದ ಬರುವ ಸಂದೇಶ ಪಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಬೆದರಿಸಲಿದೆ ಕ್ಯಾಮರಾ

ಎಐ ಕ್ಯಾಮರಾ ಪ್ರಾಣಿಗಳನ್ನು ಗುರುತಿಸಿ ಅದರ ಧ್ವನಿಯಂತೆ ಸದ್ದು ಮಾಡಿ ವಾಪಸ್ ಅರಣ್ಯಕ್ಕೆ ಓಡಿಸುವ ಪ್ರಯತ್ನವನ್ನೂ ನಡೆಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಲ್ಲದೆ, ವನ್ಯಜೀವಿಗಳ ಆವಾಸಸ್ಥಾನ ಅಭಿವೃದ್ಧಿ ಮತ್ತು ಕಳೆಗಿಡಗಳ ನಿರ್ಮೂಲನೆ ಮಾಡಿ ಹುಲ್ಲುಗಾವಲು ಬೆಳೆಸಲಾಗುತ್ತಿದೆ. ವನ್ಯಪ್ರಾಣಿಗಳಿಗಾಗಿ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತಾರಣ್ಯಗಳಲ್ಲಿ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಕುಪ್ರಾಣಿಗಳೇ ಹೆಚ್ಚು ಬಲಿ

ವನ್ಯಪ್ರಾಣಿಗಳಿಂದ ಮಾನವ ಮತ್ತು ಸಾಕು ಪ್ರಾಣಿಗಳ ಹಾನಿ ಹೆಚ್ಚಾಗುತ್ತಿದೆ. 2025ರ ನವೆಂಬರ್‌ವರೆಗೆ 34 ಮಂದಿ ಕಾಡುಪ್ರಾಣಿಗಳಿಗೆ ಬಲಿಯಾಗಿದ್ದಾರೆ. ಇವರಿಗೆ 6.20 ಕೋಟಿ ರೂ. ಪರಿಹಾರ ನೀಡಲಾಗಿದೆ. ಅದೇ ರೀತಿಯಾಗಿ 1784 ಸಾಕು ಪ್ರಾಣಿಗಳಿಗೆ ಹಾನಿಯಾಗಿದ್ದು, 2.45 ಕೋಟಿ ರೂ. ಪರಿಹಾರ ನೀಡಿರುವ ಬಗ್ಗೆ ಅರಣ್ಯ ಇಲಾಖೆ ಅಂಕಿಅಂಶಗಳು ತಿಳಿಸಿವೆ.