ಬೆಂಗಳೂರು: ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಅಡ್ವೊಕೇಟ್ ಜನರಲ್ (ಎಜಿ) ಅವರ ಲಿಖಿತ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಖಾಸಗಿ ಕಂಪನಿಯೊಂದು ಐಪಿಎಸ್ ಅಧಿಕಾರಿ ಸೇರಿ ನಾಲ್ವರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿ ಈ ಹಿಂದೆ ಜಾರಿಗೊಳಿಸಿದ್ದ ನೋಟಿಸ್ ಹಿಂಪಡೆದಿರುವ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಎಜಿ ಅನುಮತಿ ಇಲ್ಲದೆ ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಕಂಪನಿಯ ರಹಸ್ಯ ಮಾಹಿತಿ ಮತ್ತು ದತ್ತಾಂಶವನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಯ್ಡಾದ ಪ್ರಭಾತ್ ಶರ್ಮಾ ಮತ್ತು ಗರಿಮಾ ಶರ್ಮಾ ಎಂಬವರ ವಿರುದ್ಧ ಕಂಪನಿಯು ಸಿವಿಲ್ ದಾವೆ ಹೂಡಿತ್ತು. ಈ ಪ್ರಕರಣದಲ್ಲಿ 2024ರ ಡಿ. 6ರಂದು ಆದೇಶ ನೀಡಿದ್ದ ಹೈಕೋರ್ಟ್, ಪ್ರತಿವಾದಿಗಳ ನಿವಾಸದಲ್ಲಿ ಸರ್ಚ್ ನಡೆಸಲು ಕೋರ್ಟ್ ಕಮಿಷನರ್ ನಿಯೋಜಿಸಿತ್ತು. ಆದರೆ, ಸರ್ಚ್ ನಡೆಸಲು ಜೈಪುರ ದಣ ಸಂಚಾರ ವಿಭಾಗದ ಎಡಿಜಿಪಿಯಾಗಿರುವ ಐಪಿಎಸ್ ಅಧಿಕಾರಿ ರಾನು ಶರ್ಮಾ, ಬೆಂಗಳೂರು ಸಿಇಎನ್ ಪೊಲೀಸ್ ಠಾಣೆಯ ಎಸಿಪಿ ತನ್ವೀರ್ ಮತ್ತು ಪ್ರತಿವಾದಿಗಳು ಅಡ್ಡಿಪಡಿಸಿದ್ದಾರೆ. ಇದು ನ್ಯಾಯಾಲಯದ ಆದೇಶದ ಉಲ್ಲಂನೆ ಎಂದು ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಈ ಅರ್ಜಿ ದಾಖಲಿಸುವ ಮೊದಲು ಕಂಪನಿಯು ಎಜಿ ಅನುಮತಿ ಪಡೆದಿಲ್ಲ. ಆದ್ದರಿಂದ ಇಡೀ ಪ್ರಕ್ರಿಯೆಯೇ ಕಾನೂನುಬಾಹಿರವಾಗಿದೆ ಎಂದು ಪ್ರತಿವಾದಿಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿರುವ ಹೈಕೋರ್ಟ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಸಿಜೆ ವಿವೇಚನೆಗೆ ಪ್ರಕರಣ:
ವಿಭಾಗೀಯ ನ್ಯಾಯಪೀಠವು ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆಯಾದರೂ, ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಕೇವಲ ಮಾಹಿತಿ ಎಂದು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ವಿಭಾಗಕ್ಕೆ ರವಾನಿಸಲು ರಿಜಿಸ್ಟ್ರಿಗೆ ತಿಳಿಸಿದೆ. ಈ ಮಾಹಿತಿಯನ್ನು ಪರಿಗಣಿಸಿ ಸ್ವಯಂಪ್ರೇರಿತ ನ್ಯಾಯಾಂಗ ಪ್ರಕ್ರಿಯೆ ಆರಂಭಿಸಬೇಕೇ ಅಥವಾ ಬೇಡವೇ ಎಂಬುದನ್ನು ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ.