Agriculture. ಕ್ಯಾಪ್ಸಿಕಂ ಬೆಳೆ 
ರಾಜ್ಯ

ಸಾವಯವ ಕೃಷಿಯಲ್ಲೇ ಸ್ವಾವಲಂಬಿ ಬದುಕು Agriculture

ಪ್ರಮುಖ ಮುಖ್ಯಾಂಶಗಳು

  • ಕುಪ್ಪೂರು ಮಂಜುಳಾ ಯಶೋಗಾಥೆ
  • ಬಹುವಿಧದ ಬೆಳೆಯಿಂದ ಮಣ್ಣಿನ ಆರೋಗ್ಯ ಸುಧಾರಣೆ
ಲಕ್ಕೂರು: ಕೃಷಿ ಕ್ಷೇತ್ರ ಕಾಲ ಕಾಲಕ್ಕೆ ಪ್ರಗತಿ ಕಂಡರೂ Agriculture ಹಲವು ಸವಾಲುಗಳು ಸಾಮಾನ್ಯ. ಪ್ರಕೃತಿ ವಿಕೋಪ, ಕಳಪೆ ಬಿತ್ತನೆ ಬೀಜ, ಮತ್ತಿತರ ವಂಚನೆಯಿಂದ ಜಿಲ್ಲೆಯ ರೈತರು ಕಂಗೆಟ್ಟಿದ್ದು, ಕೃಷಿ ಸಹವಾಸವೇ ಬೇಡ ಎನ್ನುವ ಕಾಲಟ್ಟದಲ್ಲಿ ಇಲ್ಲೊಬ್ಬ ರೈತ ಮಹಿಳೆ ಸಾವಯವ ಕೃಷಿ ಮೂಲಕವೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಕುಪ್ಪೂರು ಗ್ರಾಮದ ಕೃಷಿಕ ಕುಟುಂಬದ ಮಂಜುಳಾ ಅವರೇ ಈ ಸಾಧಕಿ. ಕುಟುಂಬ ಸದಸ್ಯರ ಸಹಕಾರದಿಂದ ತೆರೆದ ಬಾವಿ, ಕೊಳವೆ ಬಾವಿ ಹಾಗೂ ಕೃಷಿ ಹೊಂಡದಲ್ಲಿನ ನೀರು ಬಳಕೆ ಮಾಡಿಕೊಂಡು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನಾನಾ ರೀತಿಯ ಬೆಳೆ ಬೆಳೆಯುವ ಮೂಲಕ ಸಮಗ್ರ ಕೃಷಿ ಬೇಸಾಯಯದಲ್ಲಿ ಯಶಸ್ವಿಯಾಗಿದ್ದು, ಸುಮಾರು 10 ಎಕರೆಯಲ್ಲಿ ಮಿಶ್ರ ಬೇಸಾಯ ಮಾಡಿ ಯಶಸ್ಸು ಕಂಡುಕೊಂಡಿದ್ದಾರೆ. ನ.15ರಂದು ಜಿಕೆವಿಕೆಯಿಂದ ಕೊಡಮಾಡುವ ಅತ್ಯುತ್ತಮ ರೈತ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬರದ ನಾಡಿನಲ್ಲಿ ಭರಪೂರ ಬೆಳೆ
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ಅಂತರ್ಜಲಮಟ್ಟ ಸಂಪೂರ್ಣ ಕುಸಿದಿದೆ.
1,500 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೂರಾರು ಕೊಳವೆಬಾವಿಗಳು ಬತ್ತಿವೆ. ರೈತರು ಕೃಷಿ ಚಟುವಟಿಕೆ ಸ್ಥಗಿತಗೊಳಿಸಿ ಜೀವನೋಪಾಯಕ್ಕಾಗಿ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಕುಪ್ಪೂರು ಗ್ರಾಮದ ಮಂಜುಳಾ, ಪತಿ ಹನುಮಂತಪ್ಪ ಸಹಕಾರದಿಂದ ಕೊಳವೆಬಾವಿ ಹಾಗೂ ಕೃಷಿ ಹೊಂಡದ ನೀರು ಬಳಕೆ ಮಾಡಿಕೊಂಡು 1 ಎಕರೆಯಲ್ಲಿ ಕ್ಯಾಪ್ಸಿಕಂ, 3 ಎಕರೆಯಲ್ಲಿ ಆಲೂಗಡ್ಡೆ, 2 ಎಕರೆಯಲ್ಲಿ ಬೀನ್ಸ್​, 2 ಎಕರೆ ರಾಗಿ ಬೆಳೆಯುತ್ತಿದ್ದು, ಇದರ ಜತೆಗೆ ಕೋಳಿ ಫಾಮ್​ರ್ ಹಾಗೂ ಉಪಕಸುಬಿನಲ್ಲಿ ತೊಡಗಿದ್ದಾರೆ.
ಜೀವಾಮೃತ ಬಳಕೆ
ಸಾವಯುವ ಗೊಬ್ಬರವನ್ನೇ ಬಳಸಿ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಪಡೆಯುವುದನ್ನು ಮಂಜುಳಾ ಕರಗತ ಮಾಡಿಕೊಂಡಿದ್ದಾರೆ. ಜೀವಾಮೃತ, ಕೊಟ್ಟಿಗೆ ಗೊಬ್ಬರ ಬೆಳೆಗಳಿಗೆ ನೀಡುವ ಮೂಲಕ ಅಧಿಕ ಲಾಭ ಗಳಿಸುತ್ತಿದ್ದಾರೆ. ತೋಟಗಾರಿಕೆ, ಕೃಷಿ ಇಲಾಖೆ, ಜಲಾನಯನ, ರೇಷ್ಮೆ ಇಲಾಖೆ, ಪಶುಸಂಗೋಪನೆ ಸೇರಿ ಹಲವು ಇಲಾಖೆಗಳ ಸಹಕಾರದಿಂದ ಹೊಸ ಪದ್ಧತಿಯ ಬೆಳೆಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.
ಉಪಕಸುಬಿಗೂ ಒತ್ತು
ಮನೆಯ ಮುಂಭಾಗದಲ್ಲಿರುವ ಶೆಡ್​ಗಳಲ್ಲಿ 3 ನಾಟಿ ಹಸು, 4 ಎಮ್ಮೆ, 26 ಕುರಿ, 16 ಮೇಕೆ, 40 ನಾಟಿ ಕೋಳಿ ಸಾಕುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವಂತಹ ಸೌಲಭ್ಯ ಸದ್ಬಳಸಿಕೊಂಡಿದ್ದಾರೆ. ಆಧುನಿಕ ಯಂತ್ರಗಳಾದ ಟ್ರ್ಯಾಕ್ಟರ್​, ರೋಟೊವೇಟರ್​, ಸೈಕಲ್​ವೀಲ್​ನಂತಹ ಆಧುನಿಕ ಉಪಕರಣ ಅಳವಡಿಸಿಕೊಂಡಿದ್ದಾರೆ.
ಏನೇನು ಬೆಳೆಯುತ್ತಾರೆ?: ಏಕಬೆಳೆಯಾಗಿ ರಾಗಿ, ಭತ್ತ, ಅವರೆ, ಹೆಸರುಕಾಳು, ತೊಗರಿ, ಅಲಸಂದೆ ಹಾಗೂ ಅಂತರ ಬೆಳೆ ಪದ್ಧತಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಟೊಮ್ಯಾಟೊ, ಕೋಸು, ಆಲೂಗಡ್ಡೆ, ಕ್ಯಾರೇಟ್​, ಮೂಲಂಗಿ, ಬೀನ್ಸ್​, ಬೀಟರೂಟ್​ ಮತ್ತು ತೆಂಗು ಜತೆಗೆ ಬಾಳೆ, ಬೆಣ್ಣೆಹಣ್ಣು, ಮಾವು, ನೇರಳೆ ಮುಂತಾದವುಗಳನ್ನು ಬೆಳೆದಿದ್ದಾರೆ.
ರಾಸುಗಳಿಗೆ ಜೋಳದ ಮೇವು, ಮೆಕ್ಕೆಜೋಳ ಮತ್ತು ನೇಪಿರ್​ಹುಲ್ಲನ್ನು ಬೆಳೆಯುತ್ತಿದ್ದು, ಮಣ್ಣಿನ ಫಲವತ್ತತೆ ಕಾಪಾಡಲು, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ಮತ್ತು ಇತರೆ ರಾಸಯನಿಕ ಗೊಬ್ಬರ ನೀಡುವುದರ ಮೂಲಕ ಪೋಷಕಾಂಶ ನಿರ್ವಹಣೆ ಮಾಡುತ್ತಿದ್ದಾರೆ.

ಉತ್ತಮ ಆರೋಗ್ಯ ಪಡೆಯಬೇಕೆಂದರೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯಬೇಕು. ರೈತರು ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಆದರೆ ಅದು ನಮ್ಮ ಮಕ್ಕಳ ಹಾಗೂ ಮುಂದಿನ ಪೀಳಿಗೆಗೆ ಸಮಸ್ಯೆಯಾಗುತ್ತದೆ. ಅಲ್ಲದೆ, ಪ್ರತಿ ದಿನದ ಸಂಪಾದನೆ ರೋಗಗಳ ವೆಚ್ಚಕ್ಕೆ ಸಾಕಾಗುವುದಿಲ್ಲ. ನಮ್ಮ ರೈತರು ಈಗಲಾದರೂ ಎಚ್ಚೆತ್ತುಕೊಂಡು ಆರೋಗ್ಯಯುತ ಹಾಗೂ ಪೌಷ್ಟಿಕ ತರಕಾರಿ ಬೆಳೆದು ಸಮೃದ್ಧ ಭಾರತದ ಅಭಿವೃದ್ಧಿಗೆ ಕೈ ಜೋಡಿಸಬೇಕು.

— ಮಂಜುಳಾ, ರೈತ ಮಹಿಳೆ, ಕುಪ್ಪೂರು, ಮಾಸ್ತಿ ಹೋಬಳಿ