ಬೆಂಗಳೂರು: ಒಡಂಬಡಿಕೆ ಷರತ್ತು ಪಾಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ನಿರ್ಮಿಸಿರುವ ‘ಸಮಗ್ರ ಶೀತಲ ಸರಪಳಿ ಘಟಕ’ವನ್ನು ‘ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ’ (ಕೆಪೆಕ್)ಸುಪರ್ದಿಗೆ ತೆಗೆದುಕೊಳ್ಳುವಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಪೂಜೇನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಕೆಪೆಕ್ ‘ಸಮಗ್ರ ಶೀತಲ ಸರಪಳಿ ಘಟಕ’ ನಿರ್ಮಿಸಿದೆ. ಈ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಒಡಬಂಡಿಕೆ ಮಾಡಿಕೊಂಡು 2024ರ ಜೂನ್‌ನಲ್ಲಿ ಮೆ// ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಪ್ರೈ.ಲಿ.ಗೆ ನೀಡಲಾಗಿತ್ತು.ಆದರೆ, ಘಟಕದ ಒಡಂಬಡಿಕೆ ಅನುಸಾರ ಈ ಕಂಪನಿಯು ಬಾಡಿಗೆ ಪಾವತಿಸಿಲ್ಲ.ಸಮರ್ಪಕವಾಗಿ ಘಟಕವನ್ನು ನಿರ್ವಹಣೆ ಮಾಡಿಲ್ಲ.
ಒಪ್ಪಂದ ನಿಯಮ ಉಲ್ಲಂಘಿಸಿ ಅನ್ಯ ಉದ್ದೇಶಕ್ಕೆ ಈ ಘಟಕವನ್ನು ಕಂಪನಿ ಬಳಸಿಕೊಂಡಿದೆ. ಹಾಗಾಗಿ, ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್‌ಗೆ ಟರ್ಮಿನೇಷನ್ ನೋಟಿಸ್ ಕೊಟ್ಟು ಘಟಕ ಹಿಂಪಡೆಯಲು ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಅವರನ್ನು ತೆರವು ಅಧಿಕಾರಿಯನ್ನಾಗಿ ಇಲಾಖೆ ನೇಮಿಸಿದೆ.
ಈ ಘಟಕದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಕಂಪನಿಯನ್ನು ನಿಯಮನುಸಾರ ತೆರವುಗೊಳಿಸಿ ಕೆಪೆಕ್ ಸಂಸ್ಥೆಯ ಸುಪರ್ದಿಗೆ ತೆಗೆದುಕೊಳ್ಳುಲು ಅಗತ್ಯ ಕ್ರಮವಹಿಸುವಂತೆ ಶಿವಪ್ರಕಾಶ್‌ಗೆ ಸೂಚಿಸಲಾಗಿದೆ.