ಯಂತ್ರೋಪಕರಣ ವಿತರಣೆ 
ರಾಜ್ಯ

4 ವರ್ಷದಲ್ಲಿ ಕೃಷಿ ಇಲಾಖೆಯಿಂಧ 3.76 ಲಕ್ಷ ರೈತರಿಗೆ ಯಂತ್ರೋಪಕರಣ ವಿತರಣೆ

ಬೆಂಗಳೂರು: ಆಧುನಿಕ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನುಷ್ಠಾನಗೊಂಡಿರುವ ಕೃಷಿ ಯಂತ್ರಧಾರೆ, ಕೃಷಿ ಯಾಂತ್ರೀಕರಣ ಯೋಜನೆಗಳಡಿ 2022-23ರಿಂದ 2025ರ ನವೆಂಬರ್ ಅಂತ್ಯಕ್ಕೆ ಸಬ್ಸಿಡಿ ಯೋಜನೆಯಡಿ ಒಟ್ಟು 3,76,342 ರೈತರಿಗೆ ಯಂತ್ರೋಪಕರಣ ವಿತರಿಸಲಾಗಿದೆ.
2022-23ರಲ್ಲಿ 53,004, 2023-24ರಲ್ಲಿ 1,16,181, 2024-25ರಲ್ಲಿ 1,37,435 ಮತ್ತು 2025ರ ನವೆಂಬರ್ ಅಂತ್ಯಕ್ಕೆ 69,722 ರೈತರಿಗೆ ವಿವಿಧ ಯಂತ್ರೋಪಕರಣ ನೀಡಲಾಗಿದೆ. ಕೃಷಿ ಯಂತ್ರಗಳ ಖರೀದಿಗೆ ಕೃಷಿ ಇಲಾಖೆ ಸಬ್ಸಿಡಿ ನೀಡುತ್ತಿದೆ. ಕೆಲ ಯೋಜನೆಗಳಿಗೆ ಶೇ.90ರವರೆಗೆ ಸಹಾಯಧನ ಸಿಗುತ್ತಿದ್ದು, ರೈತರು ಹತ್ತಿರದ ಕೃಷಿ ಇಲಾಖೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಇನ್ನು ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನವಾಗಿರುವ ವಿವಿಧ ಅಭಿವೃದ್ಧಿ ಯೋಜನೆಗಳಡಿ 3 ವರ್ಷದಲ್ಲಿ ಪ್ರತ್ಯೇಕವಾಗಿ 52,745 ರೈತರಿಗೆ ಉಪಕರಣ ನೀಡಲಾಗಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಹಾಗೂ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿಗೆ ಶೇ.50ರಿಂದ ಶೇ.80 ಸಬ್ಸಿಡಿ ದೊರೆಯಲಿದೆ. ಕೃಷಿ ಯಂತ್ರಧಾರೆ ಯೋಜನೆಯಡಿ ಹೋಬಳಿ ಮಟ್ಟದ ಕಸ್ಟಮ್ ಹೈರ್ ಸರ್ವೀಸ್ ಸೆಂಟರ್‌ಗಳ (ಸಿಎಚ್‌ಎಸ್ಸಿ) ಮೂಲಕ ಯಂತ್ರಗಳ ಬಾಡಿಗೆ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. ಕೃಷಿ ಭಾಗ್ಯ ಕಾರ್ಯಕ್ರಮದಡಿ ಕೃಷಿ ಹೊಂಡದೊಂದಿಗೆ ಸೋಲಾರ್, ಡೀಸೆಲ್ ಪಂಪ್‌ಸೆಟ್‌ಗೆ ಶೇ.90 ಸಹಾಯಧನ ಇರಲಿದೆ. ಕಳೆ ಕೀಳುವ ಯಂತ್ರ, ಪವರ್ ಟಿಲ್ಲರ್ ಸೇರಿ ಕೃಷಿ ಸಲಕರಣಗಳಿಗೆ ಶೇ. 90 ರಿಯಾಯಿತಿ ದೊರೆಯಲಿದೆ.
ರೈತರಿಗೆ ಹಲವು ಪ್ರಯೋಜನ
ಯಂತ್ರೋಪಕರಣ, ಸಲಕರಣೆಗಳ ಬಳಕೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ. ದುಬಾರಿ ಯಂತ್ರಗಳನ್ನು ಖರೀದಿಸುವ ಮತ್ತು ನಿರ್ವಹಿಸುವ ಹೆಚ್ಚಿನ ವೆಚ್ಚ ಉಳಿಸುತ್ತಿದ್ದಾರೆ. ಸಣ್ಣ ರೈತರಿಗೆ ಸುಧಾರಿತ ಕೃಷಿ ತಂತ್ರಜ್ಞಾನ ಬಳಸಲು ಅವಕಾಶ ಸಿಗುತ್ತದೆ.
428 ಕೋಟಿ ರೂ. ಮೀಸಲು
ಪ್ರಸಕ್ತ ಸಾಲಿನಲ್ಲಿ ಯಂತ್ರೋಪಕರಣಗಳಿಗೆ ಸಹಾಯಧನ ಒದಗಿಸಲು ಕೇಂದ್ರ, ರಾಜ್ಯ ಸರ್ಕಾರ ಸೇರಿ ಒಟ್ಟು 428 ಕೋಟಿ ರೂ. ಮೀಸಲಿಟ್ಟಿವೆ. ಇದರಲ್ಲಿ 319 ಕೋಟಿ ರೂ. ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನು ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಯಂತ್ರೋಪಕರಣಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ, ರಾಜ್ಯ ಸರ್ಕಾರ ಕೋರಿದೆ.