ಬೆಂಗಳೂರು: ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಕೃಷಿ ಜಮೀನು ಖರೀದಿಸಿ ಕೊನೆಗೆ ನಿರ್ದಿಷ್ಟ ಉದ್ದೇಶಕ್ಕೆ ಬಳಕೆ ಮಾಡದೆ ಇದ್ದರೆ ಅಂತಹವರಿಗೆ ಮತ್ತೊಂದು ಅವಕಾಶ ಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
2020ಕ್ಕೂ ಮೊದಲು ಕೃಷಿ ಭೂಮಿಯನ್ನು ಕೃಷಿಕರಷ್ಟೇ ಖರೀದಿಸುವ ಷರತ್ತು ಇತ್ತು. ಹೀಗಾಗಿ ಉದ್ಯಮಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 109ರ ಅಡಿ ಅನುಮತಿ ಪಡೆದು ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆ, ಸಣ್ಣ ಉದ್ದಿಮೆ/ಕೈಗಾರಿಕೆಗೆಂದು ಖರೀದಿಸಿದ್ದರು. ಕಾರಣಾಂತರಗಳಿಂದ ನಿಗದಿತ ಉದ್ದೇಶಕ್ಕೆ ಭೂಮಿ ಬಳಸಲು ಸಾಧ್ಯವಾಗದೆ ಭೂಮಾಲೀಕರು ಜಮೀನನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ ಉದ್ದೇಶಿತ ಯೋಜನೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರು ಸಣ್ಣ ಕೈಗಾರಿಕೆಗೆಂದು ಅನುಮತಿ ಪಡೆದಿದ್ದು, ಇದೀಗ ಸುತ್ತಮುತ್ತ ವಸತಿ ಪ್ರದೇಶ ಆಗಿರುವುದರಿಂದ ಕೈಗಾರಿಕೆ ಶುರು ಮಾಡಲು ಸಾಧ್ಯವಾಗುತ್ತಿಲ್ಲ.
ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ
ಕೆಲವು ಕಡೆ ಶಿಕ್ಷಣ ಸಂಸ್ಥೆಗೆಂದು ಅನುಮತಿ ಪಡೆದಿದ್ದು, ಶಿಕ್ಷಣ ಸಂಸ್ಥೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇಂತಹವರಿಗೆ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿಗೆ ಕಂದಾಯ ಇಲಾಖೆ ಕರಡು ಸಿದ್ಧಪಡಿಸಿದೆ. ಹಳೆಯ ಕಾಯ್ದೆ ಪ್ರಕಾರ ಅನುಮತಿಗಾಗಿ ಸರ್ಕಾರ ಮುಖ್ಯ ಕಾರ್ಯದರ್ಶಿವರೆಗೆ ಬರಬೇಕಿತ್ತು. ತಿದ್ದುಪಡಿ ಕಾಯ್ದೆ ಪ್ರಕಾರ ಆಯಾ ಡಿಸಿಗಳಿಗೆ ಅನುಮತಿ ಕೊಡುವ ಹೊಣೆ ನೀಡಲಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ 2-4 ಎಕರೆ ಜಮೀನಿನ ಮೇಲಿನ ಷರತ್ತು ಸಡಿಕೆಗೆ ಆಯಾ ಡಿಸಿಗಳಿಗೆ ಅವಕಾಶ ನೀಡಲಾಗುತ್ತಿದೆ. 4 ಎಕರೆಗೂ ಹೆಚ್ಚಿದ್ದರೆ ಉನ್ನತ ಮಟ್ಟದ ಸಮಿತಿ ಅನುಮೋದನೆ ಪಡೆಯಬೇಕಾಗುತ್ತದೆ.
ಕಮಿಟಿಗೆ ಸಿಎಸ್ ಅಧ್ಯಕ್ಷತೆ
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ನೀಡುವ ಅನುಮತಿ ಆಟೋಮ್ಯಾಟಿಕ್ ಭೂ-ಪರಿವರ್ತನೆ ಆಗಿರುತ್ತದೆ. ಇದಲ್ಲದೆ, ಈ ಹಿಂದೆ ಸಣ್ಣ ಉದ್ದಿಮೆದಾರರು/ಶಿಕ್ಷಣ ಸಂಸ್ಥೆಗಳು ಯಾವುದೋ ಉದ್ದೇಶಕ್ಕೆ ಭೂಮಿ ಪಡೆದುಕೊಂಡು ಬೇರೇನೋ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವುದಕ್ಕೆ ಅವಕಾಶ ಇರಲಿಲ್ಲ. ಪ್ರಸ್ತುತ ಅವಕಾಶ ನೀಡಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹ
ನವೀಕರಿಸಬಹುದಾದ ಇಂಧನ ಕ್ಷೇತ್ರ ಪ್ರಸ್ತುತ ಉದಯೋನ್ಮುಖ ವಲಯ. ದೇಶದ ಆದ್ಯತೆ ಕಲ್ಲಿದ್ದಲಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಕಡೆ ಬದಲಾಗಬೇಕು. ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ, ಮಧ್ಯವರ್ತಿಗಳ ಕಾಟಕ್ಕೆ ಸಣ್ಣ ಉದ್ದಿಮೆದಾರರು ಬೇಸತ್ತಿದ್ದಾರೆ. ಹೀಗಾಗಿ ಮಧ್ಯವರ್ತಿಗಳ ಉಪಟಳ ತಪ್ಪಿಸಿ ಬಂಡವಾಳ ಹೆಚ್ಚಿಸುವ ಸಲುವಾಗಿ ಆಟೋ ಕನ್‌ವರ್ಷನ್‌ಗೆ ಅವಕಾಶ ನೀಡಲಾಗಿದೆ.