ಕೃಷಿ ಮೇಳದಲ್ಲಿ ಗಮನ ಸೆಳೆದ ಹುಲ್ಲಿನ ಸ್ವಾಗತ ಕಮಾನು.
- ಸಚಿವ ಶರಣ ಪ್ರಕಾಶ ಪಾಟೀಲ್ ಅವರಿಂದ ಉದ್ಘಾಟನೆ
- ಮಣ್ಣು-ನೀರು ಸಂರಕ್ಷಣೆಗೆ ತಜ್ಞರ ಸಲಹೆ
ರಾಯಚೂರು: ಕೃಷಿ ವಿವಿ ಆವರಣದಲ್ಲಿ ಗುರುವಾರ ಕೃಷಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಚಾಲನೆ ನೀಡಿದರು. ವಿವಿಧ ಇಲಾಖೆಗಳು ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ತೆರೆದಿರುವ ಹತ್ತಾರು ಮಳಿಗೆಗಳಲ್ಲಿ ರೈತರು ಅತ್ಯಂತ ಉತ್ಸಾಹದಿಂದ ಮಾಹಿತಿ ಪಡೆಯುತ್ತಿರುವುದು ಕಂಡುಬಂತು.
ಕೃಷಿ ಮೇಳಕ್ಕೆ ಆಗಮಿಸುವವರನ್ನು ಬರಮಾಡಿಕೊಳ್ಳಲು ಹುಲ್ಲಿನಿಂದಲೇ ಸಿದ್ಧಪಡಿಸಲಾಗಿರುವ ವಿಶಿಷ್ಟ ಶೈಲಿಯ ಸ್ವಾಗತ ಕಮಾನು ಎಲ್ಲ ಗಮನ ಸೆಳೆಯುತ್ತಿದೆ. ಹುಲ್ಲು, ಮೆಕ್ಕೆಜೋಳ, ಈರುಳ್ಳಿ, ಟೊಮ್ಯಾಟೊ, ಬದನೆಕಾಯಿ ಹಾರ ಸೇರಿದಂತೆ ವಿವಿಧ ತರಕಾರಿ, ಬುಟ್ಟಿಗಳು ಹಾಗೂ ಕೃತಕ ಹಸು ಸೇರಿದಂತೆ ಕೃಷಿ ಕಾಯಕದ ಹಲವು ವಸ್ತುಗಳನ್ನು ಬಳಸಿ ಈ ಕಮಾನು ನಿರ್ಮಿಸಲಾಗಿದ್ದು, ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿದೆ. ಮೇಳಕ್ಕೆ ಭೇಟಿ ನೀಡುವ ಸಾರ್ವಜನಿಕರು ಈ ಕಮಾನು ಮುಂದೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು.
ಇಲಾಖಾವಾರು ಮಾಹಿತಿ ಮಳಿಗೆಗಳು
ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ವಿವಿಧ ಇಲಾಖೆಗಳು ಪ್ರತ್ಯೇಕ ಮಳಿಗೆಗಳನ್ನು ತೆರೆದು ಮಾಹಿತಿ ನೀಡುತ್ತಿವೆ. ಜಲಾನಯನ ಅಭಿವೃದ್ಧಿ ಯೋಜನೆಯಡಿ ಮಣ್ಣಿನ ಮಾದರಿಗಳು ಮತ್ತು ಅದಕ್ಕೆ ಪೂರಕವಾದ ಬೆಳೆ ಪದ್ಧತಿಗಳ ಬಗ್ಗೆ ವಿವರಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ವಿಭಾಗದ ವತಿಯಿಂದ ಸವಳು ಜವಳು ಮಣ್ಣನ್ನು ಫಲವತ್ತುಗೊಳಿಸುವ ವಿಧಾನ ಹಾಗೂ ನೀರನ್ನು ವ್ಯರ್ಥ ಮಾಡದೆ ಸಮರ್ಪಕವಾಗಿ ಬಳಸುವ ತಾಂತ್ರಿಕತೆಗಳನ್ನು ತಿಳಿಸಿಕೊಡಲಾಗುತ್ತಿದೆ.
ಕೃಷಿ ಮೇಳಕ್ಕೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಗುರುವಾರ ಚಾಲನೆ ನೀಡಿದರು. ಶಾಸಕರಾದ ಬಸನಗೌಡ ದದ್ದಲ್, ಡಾ. ಶಿವರಾಜ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಪಾಮಯ್ಯ ಮುರಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಒ ಈಶ್ವರ ಕುಮಾರ್ ಕಾಂದೂ, ಎಸ್ಪಿ ಅರುಣಾಂಗ್ಷು ಗಿರಿ, ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಇದ್ದರು.
ಬೇಸಾಯ ಕ್ರಮಗಳ ಪರಿಚಯ
ಭತ್ತ, ಹತ್ತಿ, ಬೇಳೆಕಾಳು, ಎಣ್ಣೆಕಾಳು ಹಾಗೂ ಸಿರಿಧಾನ್ಯಗಳ ವಿವಿಧ ಸುಧಾರಿತ ತಳಿಗಳ ಪರಿಚಯವನ್ನೂ ಇಲ್ಲಿ ಮಾಡಲಾಗುತ್ತಿದೆ. ಸೂರ್ಯಕಾಂತಿ ಬೆಳೆ ಲಾಭದಾಯಕಗೊಳಿಸುವಿಕೆ, ನೈಸರ್ಗಿಕ ವಿಪತ್ತು ಎದುರಾದಾಗ ಮತ್ತು ಕೃಷಿ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ರೈತರು ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ತಜ್ಞರು ಮಾರ್ಗದರ್ಶನ ನೀಡುತ್ತಿದ್ದಾರೆ.
ಆಕರ್ಷಿಸಿದ ಕೀಟ ಪ್ರಪಂಚ
ಮಳಿಗೆಗಳಲ್ಲಿನ ವಿಸ್ಮಯಕಾರಿ ಕೀಟ ಪ್ರಪಂಚವು ನೋಡುಗರನ್ನು ಆಕರ್ಷಿಸುತ್ತಿದ್ದು, ಕೀಟಗಳ ಜೀವನ ಚಕ್ರ ಹಾಗೂ ವೈವಿಧ್ಯತೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ಬಗೆಯ ಬಿತ್ತನೆ ಬೀಜಗಳು, ಕೀಟನಾಶಕಗಳು ಹಾಗೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ಲಭ್ಯವಾಗುತ್ತಿದೆ.