ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ‘ವಿಜಯವಾಣಿ’ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಜಾನುವಾರು ಪ್ರದರ್ಶನವನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.
ವಿಜಯವಾಣಿ ಆಯೋಜನೆಯ 3 ದಿನಗಳ ಕಾರ್ಯಕ್ರಮಕ್ಕೆ ಚಾಲನೆ | ಅನ್ನದಾತ-ಕೃಷಿ ವಿಜ್ಞಾನಿಗಳ ಸಮಾಗಮ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ದಿನವೇ ಕೃಷಿ ಮೇಳ ಅಕ್ಷರಶಃ ಕಳೆಗಟ್ಟಿತ್ತು. ಉದ್ಘಾಟನಾ ಕಾರ್ಯಕ್ರಮವೂ ರೈತರ ಪಾಲಿಗೆ ಜಾತ್ರೆಯಾಗಿ ಮಾರ್ಪಟ್ಟರೆ, ಜಾನಪದ ನೃತ್ಯ ವೈಭವ ಸಾಂಸ್ಕೃತಿಕ ಸಿರಿವಂತಿಕೆಯನ್ನು ತೆರೆದಿಟ್ಟಿತು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರಿಗೆ ರಸದೌತಣ ಉಣಬಡಿಸಿದವು. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು ಸೇರಿ ರಾಜ್ಯದ ಹಲವು ಜಿಲ್ಲೆಗಳ ಸಾವಿರಾರು ರೈತರು ಮತ್ತು ಸಾರ್ವಜನಿಕರು ಬಿರುಬಿಸಿಲಿನ ನಡುವೆಯೂ ಮೇಳಕ್ಕೆ ಭೇಟಿ ನೀಡಿ ಸಂಭ್ರಮಿಸಿದರು.
ಮೈಸೂರು ವಿಶ್ವವಿದ್ಯಾಲಯ ಮತ್ತು ರಾಜ್ಯ ಸರ್ಕಾರ ಸಹಯೋಗದಲ್ಲಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ‘ರೈತರ ಅಭಿವೃದ್ಧಿಗೆ ನಮ್ಮ ಕೊಡುಗೆ’ ಪರಿಕಲ್ಪನೆ ಅಡಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ‘ಕೃಷಿ ಮೇಳಕ್ಕೆ’ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
- ಆದಾಯ ದ್ವಿಗುಣಕ್ಕೆ ಸಮಗ್ರ ಕೃಷಿ ನೀತಿ ಅವಶ್ಯ.
- ಒಂದು ಎಕರೆ ಜಮೀನಿನಲ್ಲಿ 10 ಬೆಳೆ ಬೆಳೆಯಿರಿ.
- ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ.
- ಉತ್ಪನ್ನಗಳನ್ನು ಪೊಟ್ಟಣ ಮಾಡಿ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಲಾಭ ಗಳಿಸಿ.
- ಸುಧಾರಿತ ಕೃಷಿ ಯಂತ್ರೋಪಕರಣ ಖರೀದಿಸಿ.
- ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ಧತಿ ಅನುಸರಿಸಿ.
ರೈತರು ಮತ್ತು ರೈತರೇತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೃಷಿ ಜಾತ್ರೆ ಇದಾಗಿದೆ. ಮೇಳದಲ್ಲಿ ಪ್ರತಿಷ್ಠಾಪಿಸಿರುವ ಬೆಳೆಗಳ ಪ್ರಾತ್ಯಕ್ಷಿಕೆಗಳು ಸೇರಿ 100ಕ್ಕೂ ಅಧಿಕ ಮಳಿಗೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಕೃಷಿ ವಿಭಾಗ, ಹವಾಮಾನ ಆಧಾರಿತ ಬೀಜ ಬಿತ್ತನೆ, ನೀರು ನಿರ್ವಹಣಾ ತಂತ್ರಜ್ಞಾನ ಕೇಂದ್ರ, ಮಣ್ಣು, ಜಲಾನಯನ, ಭತ್ತ, ಸಸ್ಯಸಂರಕ್ಷಣೆ, ರೇಷ್ಮೆ, ಎಣ್ಣೆಕಾಳು, ದ್ವಿದಳಧಾನ್ಯ, ಕೀಟಶಾಸ್ತ್ರ, ವಾಣಿಜ್ಯ ಬೆಳೆ, ಜೈವಿಕ ಗೊಬ್ಬರ ಮತ್ತು ಜೀಜ ತಾಂತ್ರಿಕತೆ ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ಸಾವಿರಾರು ಮಂದಿ ಭೇಟಿ ನೀಡಿ, ಮಾಹಿತಿ ಪಡೆದರು.
ಆಯಾ ಪ್ರಾತ್ಯಕ್ಷಿಕ ಕೇಂದ್ರಗಳಲ್ಲಿ ಬೆಳೆಗಳ ಕುರಿತು ಮಾಹಿತಿ ಫಲಕ ಹಾಕಲಾಗಿದೆ. ತಳಿಯ ಹೆಸರು, ಬೆಳೆಯುವ ದಿನಗಳ ಅವಧಿ, ಇಳುವರಿ, ಯಾವ ತಿಂಗಳಲ್ಲಿ ಬೀಜ ಬಿತ್ತನೆ ಮಾಡಬೇಕು? ಹಿಂಗಾರು, ಮುಂಗಾರು ಸಂದರ್ಭದಲ್ಲಿ ಯಾವ್ಯಾವ ಬೆಳೆ ಬೆಳೆಯಬೇಕು? ಹವಾಮಾನ ವೈಪರೀತ್ಯ ಸಮಸ್ಯೆಯಿಂದ ಬೆಳೆ ರಕ್ಷಿಸಿಕೊಳ್ಳುವುದು ಹೇಗೆ? ಮತ್ತು ಕಳೆಯಿಂದ ಬೆಳೆ ರಕ್ಷಿಸಿಕೊಳ್ಳುವ ಬಗ್ಗೆ ಹೇಗೆ? ಎಂಬುದರ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ.
ವಿಚಾರಗೋಷ್ಠಿಯಲ್ಲಿ ‘ಬದಲಾಗುತ್ತಿರುವ ಕೃಷಿ’ ಬಗ್ಗೆ ಕೃಷಿತಜ್ಞರು ಉಪಯುಕ್ತ ಮಾಹಿತಿ ನೀಡಿದರು. ಸಮೂಹ ನೃತ್ಯ, ಗೀತಗಾಯನ ಗಮನ ಸೆಳೆದವು. ಜಾನುವಾರು, ಗಿಡ್ಡಹಸು, ಕೋಳಿ, ಕುರಿ ಮತ್ತು ಮೇಕೆ ವೀಕ್ಷಿಸಿದ ಸಾರ್ವಜನಿಕರು ಸೆಲ್ಪೀ ಕ್ಲಿಕ್ಕಿಸಿ ಸಂತಸಪಟ್ಟರು. ಮೇಳದ ಫುಡ್ಕೋರ್ಟ್ನಲ್ಲಿ ತರಹೇವಾರಿ ತಿನಿಸುಗಳ ಆಹಾರ ಮಳಿಗೆಗಳು ಆಕರ್ಷಣೆ ಕೇಂದ್ರವಾಗಿವೆ.