ಹೊಸ ಹೂಡಿಕೆ ಜಾಗತಿಕ ಹೂಡಿಕೆದಾರರ ಸಮಾವೇಶ  
ರಾಜ್ಯ

48 ಬಹುರಾಷ್ಟ್ರೀಯ ಕಂಪನಿಗಳ ಜತೆಗೆ ಒಪ್ಪಂದ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಬಂಡವಾಳ ಹೂಡಿಕೆ ಸಮಾವೇಶ-2026ದಲ್ಲಿ ವೈಮಾಂತರಿಕ್ಷ, ವಾಹನ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ 48 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ 51,469 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಿವೆ.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಮ್ಮುಖದಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರು ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿ, ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಈ ವೇಳೆ ಮಾತನಾಡಿದ ಸಚಿವ ಪಾಟೀಲ್, ಹೊಸ ಹೂಡಿಕೆ ಜಾಗತಿಕ ಹೂಡಿಕೆದಾರರ ಸಮಾವೇಶ ಹಾಗೂ ದಾವೋಸ್ ಶೃಂಗಸಭೆಗೆ ಹೊರತಾಗಿದ್ದು, 2 ತಿಂಗಳ ಸತತ ಪ್ರಯತ್ನದ ಫಲ ಇದಾಗಿದೆ. ಬಂಡವಾಳ ಹೂಡಿಕೆ ಆಕರ್ಷಿಸುವ ಪ್ರಯತ್ನಗಳು ಮುಂದೆಯೂ ಸುಸ್ಥಿರ ರೀತಿಯಲ್ಲಿ ನಡೆಯಲಿವೆ. ಈ ಹೂಡಿಕೆ ಬದ್ಧತೆಗಳಿಂದ ರಾಜ್ಯದಲ್ಲಿ 70 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಸದ್ಯದ ಜಾಗತಿಕ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉದ್ಯಮಗಳು ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿರುವಾಗ ಸರ್ಕಾರ ಮತ್ತು ಉದ್ಯಮ ವಲಯಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವು ಈ ಮೊದಲಿಗಿಂತ ಹೆಚ್ಚಿದೆ. ವೈಮಾಂತರಿಕ್ಷ ಹಾಗೂ ರಕ್ಷಣೆ, ವಿದ್ಯುತ್ ಚಾಲಿತ (ಇವಿ) ಸೇರಿದಂತೆ ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್, ಡೇಟಾ ಸೆಂಟರ್, ಔಷಧಿ, ಜೈವಿಕ ತಂತ್ರಜ್ಞಾನ ಮತ್ತು ತಯಾರಿಕಾ ವಲಯದ ದೇಶಿ ಮತ್ತು ಜಾಗತಿಕ ಮಟ್ಟದ 48 ಕಂಪನಿಗಳು ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ವಹಿವಾಟು ವಿಸ್ತರಣೆ ಉದ್ದೇಶದ ಬಂಡವಾಳ ಹೂಡಿಕೆಗೆ ಬದ್ಧತೆ ಪ್ರದರ್ಶಿಸಿವೆ ಎಂದರು.
ಬಂಡವಾಳ ಹೂಡಿಕೆಗೆ ಗುರುತಿಸಲಾಗಿರುವ ವಿವಿಧ ವಲಯಗಳು ಮತ್ತು ಹೂಡಿಕೆಯ ಮೊತ್ತವು, ರಾಜ್ಯದಲ್ಲಿನ ಕೈಗಾರಿಕಾ ಸ್ನೇಹಿ, ಸುಲಲಿತ ಉದ್ಯಮ ನೀತಿ, ಕುಶಲ ಮಾನವ ಸಂಪನ್ಮೂಲದ ವಿಪುಲ ಲಭ್ಯತೆ ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯದಲ್ಲಿ ಉದ್ಯಮ ದಿಗ್ಗಜರು ಹೊಂದಿರುವ ದೃಢ ವಿಶ್ವಾಸದ ಪ್ರತೀಕವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ತೇಜನ ಕ್ರಮಗಳ ಪುನರುಚ್ಚಾರ :

ಉದ್ಯಮಗಳಿಗೆ ಸರ್ಕಾರ ನೀಡುತ್ತಿರುವ ಉತ್ತೇಜನ ಕ್ರಮಗಳನ್ನು ಪುನರುಚ್ಚರಿಸಲಾಯಿತು. ವಿಶೇಷವಾಗಿ ಕೈಗಾರಿಕೆಗಳ ಬಳಕೆಗೆ ಲಭ್ಯವಿರುವ ಭೂಮಿಯ ವಿಸ್ತೀರ್ಣವನ್ನು ಕೈಗಾರಿಕಾ ಪಾರ್ಕ್‌ಗಳ ಮಟ್ಟದಲ್ಲಿ ಶೇ.68 ರಿಂದ ಶೇ.70ಕ್ಕೆ ಮತ್ತು ವೈಯಕ್ತಿಕ ನಿವೇಶನ ಮಟ್ಟದಲ್ಲಿ ಶೇ.34-44 ರಿಂದ ಶೇ.48-53ಕ್ಕೆ ಹೆಚ್ಚಿಸಲು ವಲಯ ನಿಯಂತ್ರಣಗಳನ್ನು ಪರಿಷ್ಕರಿಸಿರುವುದನ್ನು ಉದ್ಯಮಿಗಳ ಗಮನಕ್ಕೆ ತರಲಾಯಿತು.