Against the Constitution of India
constitution ಶಿರಾ: ಕರ್ನಾಟಕ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ&2025 ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅಧ್ಯಕ್ಷತೆಯಲ್ಲಿ ಶಿರಾ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟಿಸಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು, ಈ ವಿಧೇಯಕವು ಸಂವಿಧಾನದ 19 (1) ಮತ್ತು (2) ಪರಿಚ್ಛೇದದಡಿ ನಾಗರಿಕರಿಗೆ ನೀಡಿರುವ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಯತ್ನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಮೂಲ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ ದಮನ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯ್ದೆಯಲ್ಲಿ ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದ್ದು, ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಿ ಇದನ್ನು ಬಳಸುವ ಅಪಾಯವಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಅಥವಾ ಸತ್ಯವನ್ನು ಹೇಳುವುದನ್ನೂ ದ್ವೇಷ ಎಂದು ಪರಿಗಣಿಸುವ ಸಾಧ್ಯತೆ ಇದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡಲಿದ್ದು, ಈ ಅಪರಾಧಗಳಿಗೆ ಜಾಮೀನು ಇರುವುದಿಲ್ಲ. ಪತ್ರಕರ್ತರ ತನಿಖಾ ವರದಿಗಳು, ಸಾಮಾಜಿಕ ಮಾಧ್ಯಮದ ಹಾಸ್ಯ ಅಥವಾ ಟೀಕೆಗಳನ್ನು ಹತ್ತಿಕ್ಕಲು ಮತ್ತು ಪ್ರತಿಭಟನೆಗಳನ್ನು ತಡೆಯಲು ಈ ವಿಧೇಯಕವನ್ನು ಬಳಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಬಿಜೆಪಿ ಆರೋಪಿಸಿದೆ.
ಚಿದಾನಂದ್ ಎಂ.ಗೌಡ ಮಾತನಾಡಿ, ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿ ಮಾಡುವ ಈ ದಮನಕಾರಿ ಕಾನೂನನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಹಾಗೂ ತೆಂಗು ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಸೇರಿದಂತೆ ಬಿಜೆಪಿಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.