ಮಾದಪ್ಪನ ಬೆಟ್ಟದಲ್ಲಿ ಬಾಲಕನ ಮೇಲೆ ಚಿರತೆ ದಾಳಿ
- ಮಹದೇಶ್ವರ ಬೆಟ್ಟದಲ್ಲಿ ಕಳೆದ ತಿಂಗಳು ಚಿರತೆ ದಾಳಿಗೆ ಭಕ್ತರೊಬ್ಬರೂ ಬಲಿಯಾದರು
- ಇದೀಗ ಮತ್ತೆ ಚಿರತೆ ದಾಳಿ ನಡೆದಿದ್ದು ಪಾದಯಾತ್ರೆ ಹೊರಟಿದ್ದ ಬಾಲಕ ಗಾಯಗೊಂಡಿದ್ದಾನೆ
- ಚನ್ನಪಟ್ಟಣ ತಾಲೂಕಿನ ಭೂವಳ್ಳಿ ಗ್ರಾಮದ ಶಸಿಕುಮಾರ್ ಪುತ್ರ ಶ್ರೇಯಾಸ್ (8) ಗಾಯಗೊಂಡ ಬಾಲಕ
ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ( Male Mahadeshwara Hills ) ತಾಳುಬೆಟ್ಟದ ಮಾರ್ಗದಲ್ಲಿ ಕಳೆದ ತಿಂಗಳು ಚಿರತೆ ದಾಳಿಗೆ ಭಕ್ತರೊಬ್ಬರೂ ಬಲಿಯಾದ ಬೆನ್ನಲ್ಲೇ ಮಂಗಳವಾರ (ಫೆ.10) ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ಚನ್ನಪಟ್ಟಣ ತಾಲೂಕಿನ ಭೂವಳ್ಳಿ ಗ್ರಾಮದ ಶಸಿಕುಮಾರ್ ಪುತ್ರ ಶ್ರೇಯಾಸ್ (8) ಗಾಯಗೊಂಡ ಬಾಲಕ. ಈತ ಕುಟುಂಬಸ್ಥರೊಂದಿಗೆ ಮಧ್ಯಾಹ್ನ 11.30ರಲ್ಲಿ ತಾಳುಬೆಟ್ಟದ ಮೂಲಕ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದನು. ಈ ವೇಳೆ 7ನೇ ತಿರುವಿನಲ್ಲಿ ಚಿರತೆ ದಿಢೀರ್ ದಾಳಿ ನಡೆಸಿದ ಪರಿಣಾಮ ಬಾಲಕನ ಕಿವಿ ಹಾಗೂ ಕೈ ಗಾಯಗೊಂಡಿದೆ.
ಬಾಲಕನನ್ನು ಮಲೆ ಮಹದೇಶ್ವರಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಚಿರತೆ ಮತ್ತೇ ದಾಳಿ ನಡೆಸಿರುವುದರಿಂದ ಭಕ್ತರು ಬೆಚ್ಚಿ ಬಿದ್ದಿದ್ದಾರೆ.
2026 ಜನವರಿ 21ರಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ - ತಾಳುಬೆಟ್ಟ ಮಾರ್ಗದಲ್ಲಿ ಪಾದಯಾತ್ರೆ ಸಾಗುವಾಗ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬುವರು ಚಿರತೆ ದಾಳಿಗೆ ಬಲಿಯಾದರು. ಚೀರನಹಳ್ಳಿ ಗ್ರಾಮದ ಸುಮಾರು ಮೂವತ್ತಕ್ಕೂ ಹೆಚ್ಚು ಗ್ರಾಮದ ಜನರ ತಂಡ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದರು. ಈ ವೇಳೆ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡು ಗಾಬರಿಗೊಂಡ ಭಕ್ತರ ತಂಡ ದಿಕ್ಕಪಾಲಾಗಿ ಓಡಿದ್ದಾರೆ. ಈ ವೇಳೆ ಪ್ರವೀಣ್ ಅವರ ಮೇಲೆ ದಾಳಿ ನಡೆಸಿದ ಚಿರತೆ ಅರಣ್ಯ ಪ್ರದೇಶಕ್ಕೆ ಎಳೆದು ಸಾಯಿಸಿತು. ಈ ಘಟನೆಯ ಬೆನ್ನಲ್ಲೇ ಮತ್ತೆ ಚಿರತೆ ದಾಳಿ ಮಾಡಿರುವುದು ಭಕ್ತರಲ್ಲಿ ಆತಂಕವನ್ನು ಮೂಡಿಸಿದೆ.
12ನೇ ತಾರೀಖಿನವರೆಗೆ ಮಾತ್ರ ಪಾದಯಾತ್ರೆ
ಫೆಬ್ರವರಿ 15ರಂದು ಶಿವರಾತ್ರಿ ಹಬ್ಬ ಇರುವ ಹಿನ್ನೆಲೆಯಲ್ಲಿ ಅನೇಕರು ಮಹದೇಶ್ವರ ಬೆಟ್ಟಕ್ಕೆ ಪದಾಯಾತ್ರೆ ಹೊರಟಿದ್ದಾರೆ. ಈ ವಿಚಾರವಾಗಿ ಸ್ಥಳೀಯ ಅರಣ್ಯಾಧಿಕಾರಿಗಳು ಮಾತನಾಡಿದ್ದು, ಫೆ.12ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ಇರುತ್ತದೆ ಎಂದಿದ್ದಾರೆ. ಅಲ್ಲದೆ, ನಿಗದಿ ಮಾಡಿದ ಮಾರ್ಗವನ್ನು ಬಿಟ್ಟು ಅನ್ಯ ಮಾರ್ಗದಲ್ಲಿ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 5.30ರೊಳಗೆ ಪಾದಯಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ.