‘ಏರೋ ಇಂಡಿಯಾ’ವೈಮಾನಿಕ ಪ್ರದರ್ಶನ 
ರಾಜ್ಯ

ಫೆ.8ರಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-Air show

ಬೆಂಗಳೂರು: ರಕ್ಷಣಾ ಸಚಿವಾಲಯ ಅಧೀನದ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್, ಯಲಹಂಕ ವಾಯುನೆಲೆಯಲ್ಲಿ ಫೆ.8ರಿಂದ ಫೆ.12ವರೆಗೆ ಏಷ್ಯಾದ ಅತಿದೊಡ್ಡ ‘ಏರೋ ಇಂಡಿಯಾ’ವೈಮಾನಿಕ ಪ್ರದರ್ಶನ ಆಯೋಜಿಸಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ನೋಡಲ್ ಏಜೆನ್ಸಿಯಾಗಿ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಎಎಲ್) ಸಹ ಆಯೋಜಕರಾಗಿ ಕಾರ್ಯನಿರ್ವಹಿಸಲಿವೆ.
ಅಮೆರಿಕ, ಬ್ರಿಟಲ್, ಇಟಲಿ,ಇಸ್ರೇಲ್ ಮತ್ತು ಜಪಾನ್ ಸೇರಿ ವಿಶ್ವದ 100ಕ್ಕೂ ಅಧಿಕ ರಾಷ್ಟ್ರಗಳ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಭಾಗವಹಿಸಲಿವೆ. ಈ ಪ್ರದರ್ಶನದಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳ ಪ್ರದರ್ಶನ, ಹೆಲಿಕಾಪ್ಟರ್, ಡ್ರೋನ್, ಸಾರಿಗೆ ವಿಮಾನಗಳ ಮತ್ತು ವೈಮಾನಿಕ ಸಾಹಸ ಪ್ರದರ್ಶನ, ರಕ್ಷಣಾ ತಂತ್ರಜ್ಞಾನಗಳ ಅನಾವರಣ, ಜಾಗತಿಕ ಹೂಡಿಕೆದಾರರ ಹಾಗೂ ರಕ್ಷಣಾ ತಜ್ಞರು ಭಾಗವಹಿಸುವಿಕೆ, ಬಿಸಿನೆಸ್ ಟು-ಬಿಸಿನೆಸ್(ಬಿಟುಬಿ) ಸಭೆಗಳು, ಸರ್ಕಾರಗಳ ನಡುವಿನ ರಕ್ಷಣಾ ಒಪ್ಪಂದಗಳ ಚರ್ಚೆ ಇರಲಿದೆ.
‘ಏರೋ ಇಂಡಿಯಾ’-2027 ‘ಮೇಕ್ ಇನ್ ಇಂಡಿಯಾ’ ಮತ್ತು ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಇನ್ನಷ್ಟು ಉತ್ತೇಜನ ನೀಡುವ ವೇದಿಕೆಯಾಗಲಿದೆ. ಭಾರತೀಯ ಉತ್ಪಾದನೆ ಮತ್ತು ರ್ತು ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿ ಇದು ರೂಪುಗೊಳ್ಳಲಿದೆ. 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆ 1.78 ಲಕ್ಷ ಕೋಟಿ ರೂ.ಗೆ ತಲುಪಿದೆ. 2029-30ರೊಳಗೆ 3 ಲಕ್ಷ ಕೋಟಿ ರೂ.ರಕ್ಷಣಾ ಉತ್ಪಾದನಾ ಗುರಿ ಹೊಂದಲಾಗಿದೆ. 38,424 ಕೋಟಿ ರೂ.ರಕ್ಷಣಾ ರಫ್ತು ವಹಿವಾಟು ನಡೆದಿದೆ. ಮುಂದಿನ ವರ್ಷಗಳಲ್ಲಿ 50 ಸಾವಿರ ಕೋಟಿ ರೂ.ಗುರಿ ಹೊಂದಲಾಗಿದೆ.
ಆವಿಷ್ಕಾರ ಪ್ರದರ್ಶನ:
ಈ ಬಾರಿಯ ವೈಮಾನಿಕ ಪ್ರದರ್ಶನವು ವಿವಿಧ ದೇಶಗಳ ಸಂಸ್ಥೆಗಳೊಂದಿಗಿನ ಹೂಡಿಕೆ, ಒಪ್ಪಂದಗಳಿಗೆ ಮಹತ್ವ ಪಡೆದುಕೊಳ್ಳಲಿದೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ಹಲವು ಆವಿಷ್ಕಾರಗಳನ್ನು ಈ ಏರ್ ಶೋನಲ್ಲಿ ಪ್ರದರ್ಶಿಸಲಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲ ಹೊಸ ಉಪಕರಣ, ಆವಿಷ್ಕಾರ, ಸಂಶೋಧನೆ ಬಗ್ಗೆ ಚಿಂತನ- ಮಂಥನ ಇರಲಿದೆ. ಏರ್ ಶೋ ವೇಳೆ ರಕ್ಷಣಾ ಸಚಿವರ ಸಮಾವೇಶ ಸಹ ಇರಲಿದೆ. ಮಿತ್ರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಹಿರಿಯ ತಜ್ಞರೊಂದಿಗೆ ಸಮಾಲೋಚನೆ,ಹಲವು ಒಪ್ಪಂದಗಳಿಗೆ ವೇದಿಕೆ ನಿರ್ಮಿಸಲಾಗುತ್ತದೆ. 100ಕ್ಕೂ ಅಧಿಕ ದೇಶೀಯ ವಿಮಾನಯಾನಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಪ್ರದರ್ಶನಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಯುದ್ಧ ವಿಮಾನಗಳ ಪ್ರದರ್ಶನ:
ಭಾರತೀಯ ವಾಯುಪಡೆಯ ತೇಜಸ್, ಸುಖೋಯ್-30 ಎಂಕೆಐ ನಂತಹ ಯುದ್ಧ ವಿಮಾನಗಳು ಮತ್ತು ಜಾಗತಿಕ ರಕ್ಷಣಾ ಸಂಸ್ಥೆಗಳ ಆಧುನಿಕ ವಿಮಾನಗಳ ಸಾಹಸ ಪ್ರದರ್ಶನ ಇರಲಿದೆ. ಈ 5 ದಿನಗಳ ಪ್ರದರ್ಶನದಲ್ಲಿ ಮೊದಲ ದಿನಗಳು ವ್ಯಾಪಾರಸ್ಥರಿಗೆ ಮೀಸಲಾಗಿದ್ದರೆ, ಕೊನೆಯ ದಿನಗಳಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶವಿರುತ್ತದೆ. ಟಿಕೆಟ್ ಮತ್ತು ಆನ್‌ಲೈನ್ ಬುಕಿಂಗ್ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.
ಏರೋಸ್ಪೇಸ್ ರಾಜಧಾನಿ ಬೆಂಗಳೂರು:
‘ಏರೋ ಇಂಡಿಯಾ’ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ಆಯ್ಕೆಯಾಗಿರುವ ಮೂಲಕ ಬೆಂಗಳೂರು,ಮತ್ತೊಮ್ಮೆ ಭಾರತ ಏರೋಸ್ಪೇಸ್ ರಾಜಧಾನಿಯಾಗಿ ಹೊರಹೊಮ್ಮಿದೆ. ಯಲಹಂಕ ವಾಯುಪಡೆ ನೆಲೆ ಹಲವು ವರ್ಷಗಳಿಂದ ಏರೋ ಇಂಡಿಯಾದ ಆತಿಥ್ಯ ವಹಿಸುತ್ತಿದ್ದು, ಜಾಗತಿಕ ಮಟ್ಟದ ಏರೋಸ್ಪೇಸ್ ಹಾಗೂ ರಕ್ಷಣಾ ಉದ್ಯಮಗಳಿಗೆ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ.