ಸಾಂದರ್ಭಿಕ ಚಿತ್ರ  
ರಾಜ್ಯ

ಮಕ್ಕಳ ಅಂಗಾಂಗ ಕಸಿಗಾಗಿ ಪರದಾಟ! ಖಾಸಗಿ ಆಸ್ಪತ್ರೆಯಲ್ಲಿ ಆರ್ಥಿಕ ಹೊರೆ

| ಕೆ.ಎಂ. ಪಂಕಜ, ಬೆಂಗಳೂರು

ಬಡ ರೋಗಿಗಳ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ‘ರಾಜ್ಯ ಅಂಗಾಂಗ ಕಸಿ ಯೋಜನೆ’ಯಡಿ ಚಿಕಿತ್ಸೆ ಪಡೆಯಲು ಅಂಗಾಂಗ ವೈಫಲ್ಯಗೊಂಡ ಮಕ್ಕಳು ಪರದಾಡುವಂತಾಗಿದೆ. ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಕಸಿ ಶಸ್ತ್ರಚಿಕಿತ್ಸೆ ನಡೆಸಲು ವ್ಯವಸ್ಥೆ ಇಲ್ಲದ ಕಾರಣ ಖಾಸಗಿಯಲ್ಲಿ ಚಿಕಿತ್ಸೆ ಪಡೆಯಲು ಅಲೆದಾಡಬೇಕಾಗಿದೆ.

ಸರ್ಕಾರ 2018ರಲ್ಲಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಫಲಾನುಭವಿಗಳಿಗಾಗಿ ಯೋಜನೆ ಜಾರಿಗೊಳಿಸಿ ಚಿಕಿತ್ಸೆಯ ವೆಚ್ಚ ಭರಿಸುವುದರ ಜತೆಗೆ ಚಿಕಿತ್ಸೆ ನಂತರ ಜೀವನ ಪರ್ಯಂತ ಅಗತ್ಯವಿರುವ ರೋಗನಿರೋಧಕ (ಇಮ್ಯುನೋ ಸಪ್ರೆಷನ್) ಔಷಧಗಳನ್ನು ಒದಗಿಸಲಿದೆ. ಆದರೆ ಈ ಸೌಲಭ್ಯ ದೊಡ್ಡವರಿಗೆ ಮಾತ್ರ ಪಡೆಯಲು ಸಾಧ್ಯವಾಗು ತ್ತಿದ್ದು, ಮಕ್ಕಳಿಗೆ ಸಮಸ್ಯೆ ಯಾಗಿ ಪರಿಣಮಿಸಿದೆ.

ಸರ್ಕಾರ 2025ರಲ್ಲಿ ಯೋಜನೆಯನ್ನು ವಿಸ್ತರಿಸಿ ಮೂತ್ರಪಿಂಡ ಕಸಿ, ಹೃದಯ ಕಸಿ, ಯಕೃತ್ ಕಸಿ, ಹೃದಯ-ಶ್ವಾಸಕೋಶ ಕಸಿ, ಶ್ವಾಸಕೋಶ ಕಸಿ ಚಿಕಿತ್ಸೆಗಳಿಗೆ ಪ್ರತ್ಯೇಕ ಪ್ಯಾಕೇಜ್ ದರ ನಿಗದಿಪಡಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಜಾರಿಗೊಳಿಸಿದೆ. ಆದರೆ ಅಲೋಜೆನಿಕ್ ಮೂಳೆ ಮಜ್ಜೆ ಕಸಿ ಹೊರತುಪಡಿಸಿ ಉಳಿದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಪಡೆಯಲು ಸಾಧ್ಯವಾಗುತ್ತಿಲ್ಲ. ಬದಲಿಗೆ, ರೆಫರ್ ಆಧಾರದ ಮೇಲೆ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಮಾಹಿತಿ ಕೊರತೆ, ಆರ್ಥಿಕ ಸಮಸ್ಯೆ ಸೇರಿ ಇತರೆ ಕಾರಣಗಳಿಂದಾಗಿ ಸಮಸ್ಯೆ ಹೊಂದಿರುವ ಎಲ್ಲ ಮಕ್ಕಳಿಗೂ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

ಯಾವ್ಯಾವ ಆಸ್ಪತ್ರೆಗಳಲ್ಲಿ ಸೌಲಭ್ಯ?

ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸ್ ಆಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ (ಐಗಾಟ್)-ಲಿವರ್ ಕಸಿ, ಇನ್ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ (ಐಎನ್ಯುು)- ಕಿಡ್ನಿ ಕಸಿ, ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವ್ಯಾಸ್ಕುಲರ್ ಸೈನ್ಸ್ ಆಂಡ್ ರಿಸರ್ಚ್ (ಎಸ್ಜೆಐಸಿಆರ್)- ಹೃದಯ ಕಸಿ, ಕರ್ನಾಟಕ ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ಕಿಮ್ಸ್​) ಹುಬ್ಬಳ್ಳಿ ಕಿಡ್ನಿ ಕಸಿ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ- ಅಲೋಜೆನಿಕ್ ಮೂಳೆ ಮಜ್ಜೆ ಕಸಿ ಚಿಕಿತ್ಸೆ ಲಭ್ಯವಿದೆ. ಉಳಿದಂತೆ 40 ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ಶಸ್ತ್ರಚಿಕಿತ್ಸೆ ಒದಗಿಸಲು ನೋಂದಾಯಿಯಾಗಿವೆ.

ಬಡವರಿಗೆ ಹೊರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ

ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿಲ್ಲ. ಹೀಗಾಗಿ ರೆಫರ್ ಆಧಾರದಲ್ಲಿ ಚಿಕಿತ್ಸೆ ಪಡೆಯಲು ಯಾವ ಆಸ್ಪತ್ರೆಗಳಲ್ಲಿ ಯಾವ ಕಸಿ ಶಸ್ತ್ರಚಿಕಿತ್ಸೆ ಲಭ್ಯವಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಇಲ್ಲ. ಇನ್ನೂ ರೆಫರ್ ಆಧಾರದಲ್ಲಿ ಖಾಸಗಿಯಲ್ಲಿ ಚಿಕಿತ್ಸೆ ಪಡೆಯಲು ಹೋದರೆ ಅಲ್ಲಿ ಪುನಃ ಆರಂಭದಿಂದ ಎಲ್ಲ ರೀತಿಯ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಿಸಬೇಕು. ಅದರ ಖರ್ಚು ರೋಗಿಯ ಕುಟುಂಬವೇ ಭರಿಸಬೇಕು. ಕಾರಣ ಸರ್ಕಾರ ಕೇವಲ ಶಸ್ತ್ರಚಿಕಿತ್ಸಾ ವೆಚ್ಚ ಹಾಗೂ ನಂತರದ ಔಷಧಗಳ ಖರ್ಚು ನೀಡಲಿದ್ದು, ವೈದ್ಯರ ಭೇಟಿ ಹಾಗೂ ಪ್ರಯೋಗಾಲಯ ಪರೀಕ್ಷೆ ಸೇರಿ ಕಸಿ ಶಸ್ತ್ರಚಿಕಿತ್ಸೆಗೂ ಮೊದಲಿನ ಎಲ್ಲ ಖರ್ಚು ಭರಿಸಬೇಕಾಗುತ್ತದೆ.

ಸೌಲಭ್ಯಗಳ ಕೊರತೆ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ರೋಬಾಟಿಕ್ ಶಸ್ತ್ರಚಿಕಿತ್ಸಾ ಸೌಲಭ್ಯ ಸೇರಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸುಸಜ್ಜಿತ ಕಟ್ಟಡಗಳನ್ನು ಹೊಂದುತ್ತಿದ್ದು, ಗುಣಮಟ್ಟದ ವೈದ್ಯಕೀಯ ಸೌಲಭ್ಯವನ್ನೇನೋ ನೀಡುತ್ತಿವೆ. ಆದರೆ ಮಕ್ಕಳ ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಯಾವೊಂದು ಸರ್ಕಾರಿ ಆಸ್ಪತ್ರೆಯೂ ಸೂಕ್ತ ರೀತಿಯಲ್ಲಿ ಸಜ್ಜಾಗಿಲ್ಲ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಮಕ್ಕಳಿಗೂ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಅನುವಾಗುವ ರೀತಿಯಲ್ಲಿ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಹಾಗೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂಬುದು ಜನಸಾಮಾನ್ಯರ ಬೇಡಿಕೆಯಾಗಿದೆ.

ಸರ್ಕಾರಿ ಆಸ್ಪತ್ರೆಗಳು ಅತ್ಯಾಧುನಿಕ ಸೌಲಭ್ಯ ಹೊಂದಿದ್ದರೂ ಮಕ್ಕಳಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಸೌಲಭ್ಯ ಇಲ್ಲದೆ ಖಾಸಗಿಗೆ ರೆಫರ್ ಮಾಡಲಾಗುತ್ತಿದೆ. ಇದರಿಂದ ಸಮಯ- ಹಣ ನಷ್ಟವಾಗುತ್ತದೆ. ಬಡವರಿಗಾಗಿ ರೂಪಿಸಿರುವ ರಾಜ್ಯ ಅಂಗಾಂಗ ಕಸಿ ಯೋಜನೆ ಸಾರ್ಥಕವಾಗಲು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ದೊರೆಯು ವಂತೆ ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು.

| ಎಂ.ಎಸ್. ಪಾಟೀಲ್ ನರಿಬೋಳ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ (ಕಲಬುರಗಿ) ಅಧ್ಯಕ್ಷ

ಅಧಿಕಾರಿಗಳು ಹೇಳೋದೇನು?

ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೂ ಕಿಡ್ನಿ ಕಸಿ ಹಾಗೂ ಮೂಳೆಮಜ್ಜೆ ಕಸಿ ಶಸ್ತ್ರಚಿಕಿತ್ಸೆ ಲಭ್ಯವಿದೆ. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಈವರೆಗೂ ಒಂದೇ ಒಂದು ಹೃದಯ ಕಸಿ ನಡೆಸಲಾಗಿದೆ. ಉಳಿದಂತೆ ಹೃದಯ ಮತ್ತು ಶ್ವಾಸಕೋಶ ಕಸಿಗಳನ್ನು ಖಾಸಗಿಯಲ್ಲಿಯೇ ನಡೆಸಲಾಗುತ್ತಿದೆ. ಐಗಾಟ್ನಲ್ಲಿ ವಯಸ್ಕರಿಗೆ ಲಿವರ್ ಕಸಿ ಸೌಲಭ್ಯವಿದ್ದು, ಮಕ್ಕಳಿಗೆ ಖಾಸಗಿಯಲ್ಲಿ ರೆಫರ್ ಮಾಡಲಾಗುತ್ತಿದೆ. ವಯಸ್ಕರಿಗೆ ಮೂಳೆ ಮಜ್ಜೆ ಕಸಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆದರೆ ಖಾಸಗಿಯಲ್ಲಿ ರೆಫರ್ ಆಧಾರದಲ್ಲಿ ಚಿಕಿತ್ಸೆ ಹಾಗೂ ಔಷಧಿಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.