ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಆರೋಗ್ಯ ಕೇಂದ್ರಗಳ ದತ್ತು ಸ್ವೀಕಾರ
- * ಮುಖ್ಯಮಂತ್ರಿಗಳ ನೂರು ದಿನಗಳ ಕಾರ್ಯಕ್ರಮಗಳಡಿ ಈ ಕ್ರಮ
- * ತಾಲೂಕು ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದತ್ತು
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ತಾಲೂಕು ಆಸ್ಪತ್ರೆ, ಸಮದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ಪಡೆದುಕೊಳ್ಳಲಿವೆ. ಈ ಕುರಿತು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿ ಸುತ್ತೋಲೆ ಹೊರಡಿಸಿವೆ.
ಮುಖ್ಯಮಂತ್ರಿಗಳ ನೂರು ದಿನಗಳ ಕಾರ್ಯಕ್ರಮಗಳಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ತಜ್ಞವೈದ್ಯರ ಸೇವೆಯನ್ನು ವೈದ್ಯಕೀಯ ಕಾಲೇಜುಗಳು ಒದಗಿಸಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಎಲ್ಲ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ತಲಾ ಒಂದು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆದು, ಅಗತ್ಯವಿರುವ ತಜ್ಞ ವೈದ್ಯಕೀಯ ಸೇವೆ, ತರಬೇತಿ, ಗುಣಮಟ್ಟ ಸುಧಾರಣೆ ಹಾಗೂ ಇತರೆ ಆರೋಗ್ಯ ಸೇವೆಗಳನ್ನು ನೀಡಲಿವೆ. ದತ್ತು ಪಡೆಯಬೇಕಾದ ಆರೋಗ್ಯ ಕೇಂದ್ರಗಳನ್ನು ಜಿಲ್ಲಾವಾರು ಗುರುತಿಸಿ, ವೈದ್ಯಕೀಯ ಕಾಲೇಜು ಮುಖ್ಯಸ್ಥರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ನಡುವೆ ಒಡಂಬಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಈ ಒಡಂಬಡಿಕೆಯಿಂದ ತಾಲೂಕು ಮಟ್ಟದಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆ ನೀಗಲಿದೆ. ಜಿಲ್ಲಾ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜುಗಳಿಗೆ ಪ್ರಯಾಣಿಸುವುದು ತಪ್ಪಲಿದೆ. ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳನ್ನು ಬಲಪಡಿಸಬಹುದು ಎಂದು ತಿಳಿಸಲಾಗಿದೆ.