ಶಹಾಪುರದಲ್ಲಿ ಶುಕ್ರವಾರ ಹಮ್ಮಿಕೊಂಡ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ, ಶರಣು ಗದ್ದುಗೆ, ಲಕ್ಷ್ಮಣ ಯಾದವ್ ಇತರರಿದ್ದರು. 
ರಾಜ್ಯ

ಶ್ರೀಕೃಷ್ಣನ ಆದರ್ಶ ಅಳವಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನಾಪುರ ಕರೆ
  • ಶಹಾಪುರದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ
ಶಹಾಪುರ: ಭಗವಾನ್ ಶ್ರೀಕೃಷ್ಣನ ಆದರ್ಶ ಹಾಗೂ ಜೀವನ ಮೌಲ್ಯಗಳು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷ್ಣನ ಸಂದೇಶ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ವಿವಿಧ ಧರ್ಮ ಹಾಗೂ ಸಮುದಾಯಗಳ ಜನರು ಶ್ರೀಕೃಷ್ಣನನ್ನು ಆರಾಽಸುತ್ತಾರೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕೃಷ್ಣನ ಜೀವನ, ಆದರ್ಶ, ಧರ್ಮ, ಸತ್ಯ ಹಾಗೂ ಕರ್ತವ್ಯದ ಸಂದೇಶ ತಿಳಿಸಬೇಕು. ಆ ಮೂಲಕ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡಬೇಕಾಗಿದೆ ಎಂದು ಶಾಸಕರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಮಾತನಾಡಿ, ಕೃಷ್ಣನು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಪ್ರಸ್ತುತವಾಗಿದ್ದೆನೆ. ಮಹಾ ಭಾರತದ ಯುದ್ಧ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಜೀವನದರ್ಶನ ಹಾಗೂ ಸಂದೇಶವೇ ಮುಂದೆ ಭಗವದ್ಗೀತೆಯಾಗಿ ವಿಶ್ವಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಅಧರ್ಮದ ವಿರುದ್ಧ ಧರ್ಮದ ವಿಜಯಕ್ಕಾಗಿ ನಡೆದ ಮಹಾಭಾರತದಲ್ಲಿ ಶ್ರೀಕೃಷ್ಣನ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿತ್ತು ಎಂದರು.
ಮೋನಪ್ಪ ಶಿರವಾಳ ಪ್ರಾಸ್ತಾವಿಕ ಮಾತನಾಡಿದರು.ತಹಶೀಲ್ದಾರರಾದ ಸಿದ್ಧಾರೂಢ ಬನ್ನಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಕರವೇ ಅಧ್ಯಕ್ಷ ಶರಣು ಗದ್ದುಗೆ, ಪೌರಾಯುಕ್ತ ಜೀವನಕುಮಾರ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಅಣ್ಣಾರಾವï, ನಿಂಗಣ್ಣ ನಾಯ್ಕೋಡಿ, ಪ್ರದೀಪ್ ಪುರ್ಲೆ, ತಾಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಸಾಯಬಣ್ಣ ಪುರ್ಲೆ, ತಾಲೂಕು ಯಾದವ ಸಮಾಜದ ಅಧ್ಯಕ್ಷ ಲಕ್ಷ್ಮಣ ಯಾದವ್ ಇತರರಿದ್ದರು. ಆರಂಭದಲ್ಲಿ ನಗರದ ಸಿಬಿ ಕಮಾನಿನಿಂದ ನಗರಸಭೆ ಆವರಣದವರೆಗೆ ಶ್ರೀಕೃಷ್ಣನ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು, ವಿವಿಧ ಕಲಾ ತಂಡಗಳೊಂದಿಗೆ ನಡೆದ ಮೆರವಣಿಗೆ ಗಮನ ಸೆಳೆಯಿತು.