Adopt legally ಗುಬ್ಬಿ: ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆದು ಪರಿಪಾಲನೆ ಮಾಡಬೇಕು. ಅನಧಿಕೃತವಾಗಿ ದತ್ತು ಪಡೆಯುವುದು ಅಪರಾಧ ಎಂದು ಗ್ರೇಡ್&2 ತಹಸೀಲ್ದಾರ್ ಶಶಿಕಲಾ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ಆಯೋಜಿಸಿದ್ದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೆ ತಮಗೆ ಬೇಕಾದವರ ಬಳಿ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದರು, ಈಗ ಕಾನೂನು ಬದಲಾಗಿದೆ. ಎಲ್ಲವೂ ಕಾನೂನಿನ ಪ್ರಕಾರವೇ ಮಾಡಬೇಕಾಗಿದೆ. ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಜಾರಿಗೆ ಬಂದಿದ್ದು, ಇದಕ್ಕೆ ಕಾನೂನಿನ ಪ್ರಕ್ರಿಯೆ ಅಗತ್ಯ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಮಾತನಾಡಿ, ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವುದು ಆ ಮಕ್ಕಳು ಮುಂದೆ ನಮಗೆ ಆಸರೆಯಾಗುವಂತೆ ಬೆಳೆಸುವುದು ಒಳ್ಳೆಯ ವಿಚಾರ. ಅದು ಕಾನೂನಾತ್ಮಕವಾಗಿರಬೇಕು. ಅದರಿಂದ, ಮಗುವಿಗೂ ಪಾಲಕರಿಗೂ ಒಳ್ಳೆಯದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯಬೇಡಿ ಎಂದು ತಿಳಿಸಿದರು.