ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎನ್ಸಿಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಆಪಾದ್ ಮಿತ್ರ ಶಿಬಿರದ ಸಮಾರೋಪದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಕಲಬುರಗಿಯ 32 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕರ್ನಲ್ ಕಸ್ತೂರಬಾ ದತ್ತಾಜಿ ಟೊಂಗೆ ಪಾಟೀಲ್ ಸತ್ಕರಿಸಿದರು. ಡಾ.ಎಂ.ಎಸ್.ಪಾಸೋಡಿ, ಎಸ್.ಪಿ.ಸುಳ್ಳದ್, ಡಾ.ಬಸವರಾಜ, ಪ್ರಮೋದ ಚೌಗಲೆ ಇತರರಿದ್ದರು.
- ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
- ಯುವ ಆಪಾದ್ ಮಿತ್ರ ಶಿಬಿರ ಸಮಾರೋಪ
ಕಲಬುರಗಿ: ಯುವ ಸಮುದಾಯ ಕಡ್ಡಾಯವಾಗಿ ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಪದವಿ ಕಾಲೇಜು ದಿನಗಳಲ್ಲಿ ಕೇವಲ ಎನ್ಸಿಸಿ ತರಬೇತಿ ಪಡೆದರೆ ಸಾಕಾಗುವುದಿಲ್ಲ. ಈ ಮೂಲಕ ಕಲಿತ ಶಿಸ್ತು, ದೇಶಸೇವೆ ಮತ್ತು ದೇಶಭಕ್ತಿಯನ್ನು ಜೀವನಪರ್ಯಂತ ಅಳವಡಿಸಿಕೊಂಡು ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯೂ ಆದ ಕಮಾಂಡಿಂಗ್ ಆಫೀಸರ್ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಹುಉಪಯೋಗಿ ಸಭಾಂಗಣದಲ್ಲಿ ಎನ್ಸಿಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಯುವ ಆಪಾದ್ ಮಿತ್ರ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ರಕ್ಷಣಾ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಎನ್ಸಿಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ, ದೇಶಸೇವೆ ಹಾಗೂ ಶಿಸ್ತಿನ ಜೀವನಶೈಲಿ ಕುರಿತು ತರಬೇತಿ ನೀಡುತ್ತಿದೆ. ಜತೆಗೆ ಪ್ರಾಕೃತಿಕ ವಿಕೋಪ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂತಹ ತರಬೇತಿ ಬಹಳ ಉಪಯುಕ್ತವಾಗಿವೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ತಕ್ಷಣ ಸ್ಪಂದನೆ, ದೇಶಸೇವೆ ಹಾಗೂ ರಕ್ಷಣಾ ೇತ್ರದಲ್ಲಿ ಸೇವೆ ಸಲ್ಲಿಸುವಂತಹ ಸಮಾಜಮುಖಿ ಕಾರ್ಯಗಳ ಬಗ್ಗೆ ಎನ್ಸಿಸಿ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಲಬುರಗಿಯ 32 ಕರ್ನಾಟಕ ಎನ್ಸಿಸಿ ಬಟಾಲಿಯನ್ ಕರ್ನಲ್ ಕಸ್ತೂರಬಾ ದತ್ತಾಜಿ ಟೊಂಗೆ ಪಾಟೀಲ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎಸ್.ಪಿ. ಸುಳ್ಳದ, ಸಿಯುಕೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಸಿಯುಕೆ ವಸತಿ ನಿಲಯಗಳ ಮುಖ್ಯ ವಾರ್ಡನ್ ಡಾ.ಬಸವರಾಜ ಎಂ.ಎಸ್, ಉಮೇಶ್, ರಾಜಕುಮಾರ ಮರಾಠಿ, ಎನ್ಸಿಸಿ ಶಿಬಿರದ ಸಂಚಾಲಕ ಪ್ರಮೋದ್ ಚೌಗಲೆ, ರವಿ ಬರದ, ಡಾ.ಮಮತಾ ನಾಟೀಕರ ಇತರರಿದ್ದರು.
"
ಎನ್ಸಿಸಿ ವಿದ್ಯಾರ್ಥಿಯಾಗುವುದು ಒಂದು ವಿಶೇಷ ಅವಕಾಶ. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ನಮ್ಮಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು.
— ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ ಕಲಬುರಗಿ.