Adopt an eco-friendly lifestyle 
ರಾಜ್ಯ

ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳಿ

ತುಮಕೂರು ಡೆಸ್ಕ್
ಶಿರಾ: ಮಾನವ ಕೇಂದ್ರಿತ ಅಭಿವೃದ್ಧಿ ಯೋಜನೆಗಳಿಂದ ಜೀವ ವೈವಿಧ್ಯತೆಗೆ ಧಕ್ಕೆ ಉಂಟಾಗುವ ತೆಗೆ ಜೀವಸಂಕುಲವು ಅವನತಿಯತ್ತ ಸಾಗುತ್ತಿದೆ ಎಂದು ಮುಖ್ಯಶಿಕ್ಷಕ ಶಿವಣ್ಣ ತಿಳಿಸಿದರು.
ಶಿರಾ ತಾಲೂಕಿನ ಬರಮಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಧನ್ವಂತರಿ ಪ್ರೌಢ ಇಕೋ ಕ್ಲಬ್ ಮತ್ತು ಅಮಾಲಗುಂದಿಯ ಚಿಗುರು ಯುವಜನ ಸಂಘದ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಹವಾಗುಣ ಬದಲಾವಣೆ ಮತ್ತು ಜೀವನಶೈಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವರ ಆಧುನಿಕ ಜೀವನಶೈಲಿಯು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ, ಸುಸ್ಥಿರ ಬದುಕಿನ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.
ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ ಮಾತನಾಡಿ, ಹವಾಗುಣ ಬದಲಾವಣೆ ಪ್ರಸ್ತುತ ಜಾಗತಿಕ ಸಮಸ್ಯೆಯಾಗಿದ್ದು, ಇಂದು ಏರುತ್ತಿರುವ ಭೂಮಿಯ ಬಿಸಿಯ ನಡುವೆ ಮನುಷ್ಯರ ಜೀವನೋಪಾಯ ಅಪಾಯದಲ್ಲಿದೆ, ಅಲ್ಲದೆ ಸುತ್ತಲಿನ ಪರಿಸರ ಮತ್ತು ಜೀವವೈವಿಧ್ಯತೆ ಉಳಿಸಿಕೊಳ್ಳುವುದು ಸಹ ಬಹುದೊಡ್ಡ ಸವಾಲಾಗಿದೆ. ಇದನ್ನು ಅರಿತು ನಮ್ಮಲ್ಲಿನ ಪರಿಸರ ಪ್ರಜ್ಞೆ ಹೆಚ್ಚಾಗಬೇಕು. ಈ ಉದ್ದೇಶದಿಂದ ಮಕ್ಕಳಿಗೆ ಹವಾಗುಣ ಬದಲಾವಣೆ ಮತ್ತು ಜೀವನಶೈಲಿ ಕಾರ್ಯಗಾರವನ್ನು ಮಾಡಲಾಗುತ್ತಿದೆ ಎಂದರು.