ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸಿ 
ರಾಜ್ಯ

ಬಿಪಿಎಲ್‌ಗೆ ಆದಾಯ ಮಿತಿ 3 ಲಕ್ಷ ರೂ: ಮಾನದಂಡ ಪರಿಷ್ಕರಣೆಗೆ ಆಡಳಿತ ಸುಧಾರಣಾ ಆಯೋಗ ಶಿಫಾರಸು-income limit

ಬೆಂಗಳೂರು:ಹೊಸ ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಪಾರಸು ಮಾಡಿದೆ.
ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಪಿಎಲ್‌ಗೆ ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಿಸುವಂತೆ ಆಹಾರ ಇಲಾಖೆಗೆ ಆಯೋಗ ಸಲಹೆ ನೀಡಿದೆ. ಈ ಕುರಿತು ಪರಿಶೀಲನೆ ನಡೆಸುತ್ತಿರುವ ಇಲಾಖೆ, ವಾರ್ಷಿಕ ಆದಾಯ ಮಿತಿ ಹೆಚ್ಚಿಸುವ ಬಗ್ಗೆ ಆಲೋಚಿಸುತ್ತಿದೆ.
ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು 2017ರಲ್ಲಿ ಕೆಲವು ಮಾನದಂಡಗಳನ್ನು ರೂಪಿಸಿತ್ತು. ಆದಾಯ ತೆರಿಗೆ ಪಾವತಿಸುವ ಕುಟುಂಬಗಳು, ಸರ್ಕಾರಿ ನೌಕರರು, ಸರ್ಕಾರಿ ಸ್ವಾಮ್ಯದ ಉದ್ಯಮ, ಮಂಡಳಿ, ಸಹಕಾರ ಸಂಘ, ನಿಗಮಗಳ ಕಾಯಂ ನೌಕರರು, ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ ಪರಿಶೋಧಕರು, ಏಳೂವರೆ ಎಕರೆ ಒಣ ಭೂಮಿ ಹೊಂದಿರುವವರು, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ವಾರ್ಷಿಕವಾಗಿ 1.20 ಲಕ್ಷ ರೂ.ಗಿಂತ ಅಧಿಕ ಆದಾಯ ಪಡೆಯುತ್ತಿರುವ ಕುಟುಂಬಗಳು, ಆಟೋರೀಕ್ಷಾ, ಕ್ಯಾಬ್ ಮತ್ತು ಟ್ರ್ಯಾಕ್ಟರ್ ಹೊರತುಪಡಿಸಿ ನಾಲ್ಕು ಚಕ್ರ ಹೊಂದಿರುವ ಕುಟುಂಬಗಳು ಹಾಗೂ ಅನುದಾನಿತ/ ಅನುದಾನರಹಿತ ಶಾಲಾ ಕಾಲೇಜು ನೌಕರರು, ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್‌, ಕಮಿಷನ್ ಏಜೆಂಟ್ಸ್, ಬೀಜ ಮತ್ತು ಗೊಬ್ಬರ ಡೀಲರ್ಸ್‌ಗಳು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ. ಈ ಮೇಲಿನ ಮಾನದಂಡ ಉಲ್ಲಂಸಿ ಪಡೆದಿರುವ ಕಾರ್ಡ್‌ಗಳನ್ನು ಇಲಾಖೆ ರದ್ದುಪಡಿಸುತ್ತಿದೆ. ಅದರಂತೆ, ಇದುವರೆಗೆ 4,56,675 ಬಿಪಿಎಲ್ ಚೀಟಿ ರದ್ದಾಗಿವೆ. ಹಳೆಯ ಮಾನದಂಡ ಪರಿಷ್ಕರಣೆಗೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿತ್ತು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ರೂಪಿಸಿರುವ ಮಾನದಂಡ ಹಾಗೂ ನೀತಿ ಆಯೋಗದವರು ರೂಪಿಸಿರುವ ಮಾನದಂಡಗಳು ಬೇರೆ ಬೇರೆಯಾಗಿದೆ. ಇದರಿಂದಾಗಿ ನೀತಿ ಆಯೋಗದ ಅಂಕಿ-ಅಂಶಗಳು ರಾಜ್ಯದ ಜನಸಂಖ್ಯೆಗೆ ಹೊಂದಾಣಿಕೆಯಾಗುತ್ತಿಲ್ಲ. ನಿರ್ಗತಿಕರಿಗೆ ಅಂತ್ಯೋದಯ ಕಾರ್ಡ್ ನೀಡಿದ್ದರೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಎಪಿಎಲ್ ಕಾರ್ಡ್ ನೀಡಲಾಗುತ್ತಿದೆ. ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ ಸಿಗುತ್ತಿದೆ. ಆದರೆ, ಎಪಿಎಲ್ ಕಾರ್ಡ್‌ಗಳು ಹೊಂದಿರುವ ಕುಟುಂಬಗಳು ಈ ಹಿಂದೆ ಕೆಜಿಗೆ 15 ರೂ.ನಂತೆ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಈ ಅಕ್ಕಿ ಪಡೆಯಲು ಎಪಿಎಲ್ ಕಾರ್ಡ್‌ದಾರರು ನಿರಾಸಕ್ತಿ ತೋರಿದ್ದರು. ಹಾಗಾಗಿ, ಸದ್ಯಕ್ಕೆ ಎಪಿಎಲ್ ಫಲಾನುಭವಿಗಳಿಗೆ ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ.
ಹೊಸ ಕಾರ್ಡ್‌ಗೆ ಹೆಚ್ಚಿದ ಬೇಡಿಕೆ
ರಾಜ್ಯಾದ್ಯಂತ ಹೊಸ ಬಿಪಿಎಲ್ ಕೋರಿ ಸಲ್ಲಿಸಿದ್ದ 3,27,309 ಅರ್ಜಿ ಬಾಕಿ ಉಳಿದಿವೆ. ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನಾಲ್ಕೈದು ವರ್ಷ ಕಳೆದರೂ ವಿಲೇವಾರಿಯಾಗಿಲ್ಲ. ಶಾಸಕರು, ಸಂಸದರು, ಸಾರ್ವಜನಿಕರಿಂದ ನಿರಂತರವಾಗಿ ಹೊಸ ಪಡಿತರ ಕಾರ್ಡ್‌ಗಳ ಬೇಡಿಕೆಗೆ ಮನವಿ ಮಾಡುತ್ತಿದ್ದಾರೆ. ಹಾಗಾಗಿ, ಅರ್ಜಿ ವಿಲೇವಾರಿಗೊಳಿಸಿ ಹೊಸ ಕಾರ್ಡ್ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.