ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡಿದ್ದರು
- ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಆಗ್ರಹ
- ಆರೋಗ್ಯ ಸಚಿವ ಯು.ಟಿ.ಖಾದರ್ಗೆ ಮನವಿ
ಹುಮನಾಬಾದ್: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನಿವಾರಿಸಿ, ಹೆಚ್ಚುವರಿ ಮೂಲಸೌಕರ್ಯ ಒದಗಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿದ್ದು, ಅಗತ್ಯ ವೈದ್ಯರಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುದೆ. ಹೀಗಾಗಿ ಕೂಡಲೇ ವೈದ್ಯರನ್ನು ನೇಮಕ ಮಾಡಬೇಕು ಎಂದು ಅವರು ಮನವಿ ಮಾಡಿದರು.
ರಾಜೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಅನುದಾನ ನೀಡಬೇಕು. ಜತೆಗೆ ಕ್ಷೇತ್ರದಲ್ಲಿ ರಸ್ತೆ ಅಪಘಾತ ಹೆಚ್ಚುತ್ತಿರುವುದರಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಚಿವ ಶರಣಪ್ರಕಾಶ ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಅಶ್ವತ್ಥ ನಾರಾಯಣ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕ ಡಾ.ಚಂದ್ರು ಲಂಬಾಣಿ ಇತರರಿದ್ದರು.