Additional funding should be allocated. 
ರಾಜ್ಯ

ಹೆಚ್ಚುವರಿ ಅನುದಾನ ಮಂಜೂರು ಮಾಡಲಿ Additional funding should be allocated.

ತುಮಕೂರು ಡೆಸ್ಕ್
funding ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿಯ ಸುಮಾರು 29 ಕೆರೆಗಳಿಗೆ ನೀರು ಬಿಡುವ ಏತ ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಾವರಿಯಿಂದ ವಂಚಿತರಾಗಿರುವ ದಬ್ಬೇಘಟ್ಟ ಹೋಬಳಿಯ ಜನರಿಗೆ ಈ ಕಾಮಗಾರಿ ಆದಲ್ಲಿ ಬಹುಪಾಲು ನೀರಿನ ಸಮಸ್ಯೆ ಬಗೆಹರಿಸಿದಂತಾಗುತ್ತದೆ ಎಂದರು.
ಈಗಾಗಲೇ ಮಲ್ಲಾಘಟ್ಟ ಕೆರೆಯಿಂದ ಕಾಮಗಾರಿ ಆರಂಭವಾಗಿದ್ದು, ಮಲ್ಲಾಘಟ್ಟದ ಬಳಿ ಜಾಕ್ವೆಲ್​ ನಿರ್ಮಿಸಲಾಗಿದೆ. ಅಲ್ಲಿಂದ ನೀರು ಹರಿಸುವ ಸಲುವಾಗಿ ಪೈಪ್​ಲೈನ್​ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈಗಾಗಲೇ ವೈಟಿ ರಸ್ತೆವರೆಗೆ ಪೈಪ್​ಲೈನ್​ ಕಾಮಗಾರಿ ಮುಗಿದಿದೆ. ಒಟ್ಟು 48 ಕೋಟಿ ರೂ. ಯೋಜನೆಗೆ ಸರ್ಕಾರ ಕೇವಲ 9 ಕೋಟಿ ರೂ. ಬಿಡುಗಡೆಗೊಳಿಸಿದೆ. ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.
ತಾಲೂಕಿನ ಮಾಯಸಂದ್ರದಿಂದ ಕೆ.ಬಿ.ಕ್ರಾಸ್​ ತನಕ ಮಾಡಲಾಗುತ್ತಿರುವ 150ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತ ತಗತಿಯಲ್ಲಿ ಸಾಗಬೇಕು. ಕೂಡಲೇ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ವೀಸ್​ ರಸ್ತೆ ಮಾಡುವ ಮೂಲಕ ಜನರಿಗೆ ಸರಾಗವಾಗಿ ಓಡಾಡಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ಮಾಡುವ ಸಂಬಂಧ ರಸ್ತೆಯ ಅಕ್ಕಪಕ್ಕ ನೂರಾರು ವರ್ಷಗಳಿಂದ ಬೆಳೆದಿದ್ದ ನೂರಾರು ಬೃಹತ್​ ಮರಗಳನ್ನು ಕಡಿಯಲಾಗಿದೆ. ಮರ ಹರಾಜು ಪ್ರಕ್ರಿಯೆಯಲ್ಲಿ ಕೋಟಿ ಕೋಟಿ ವಂಚನೆ ಮಾಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಲೂಟಿ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆಂದು ಹೇಳಿದರು.
ಲಿಂಕ್​ ಕೆನಾಲ್​ಗೆ ತಡೆಯದಿದ್ದರೆ 50 ಕೋಟಿ ರೂ.: ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಚಾಲನೆಯಲ್ಲಿದೆ. ತಿಪಟೂರು, ಗುಬ್ಬಿ ತಾಲೂಕಿನಲ್ಲಿ ಕಾಮಗಾರಿ ಮಾಡಲು ತಲಾ 50 ಕೋಟಿ ರೂ. ನೀಡಲಾಗಿದೆ. ಆದರೆ ತುರುವೇಕೆರೆಗೆ ಕೇವಲ 30 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ, ಲಿಂಕ್​ ಕೆನಾಲ್​ಗೆ ತಡೆ ಒಡ್ಡದಿದ್ದರೆ 50 ಕೋಟಿ ರೂ. ಕೊಡ್ತೇನೆ ಎಂದು ಆಮಿಷ ಒಡ್ಡುತ್ತಾರೆ. ನಮಗೆ ಜಿಲ್ಲೆಯ ರೈತ ಹಿತ ಮುಖ್ಯವೇ ಹೊರೆತು ಅವರು ನೀಡುವ ಆಮಿಷವಲ್ಲ ಎಂದು ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.