- ಜಿಲ್ಲೆಗಳ ಉಪನಿರ್ದೇಶಕರು ಹೆಚ್ಚುವರಿಯಾಗಿ ಶಿಕ್ಷಕರ ಅಗತ್ಯ ಇರುವ ಬಗ್ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಪಿಎಸ್‌ಟಿ ಮತ್ತು ಜಿಪಿಟಿ ವೃಂದದ 6,617 ಅತಿಥಿ ಶಿಕ್ಷಕರನ್ನು ಮಂಜೂರು
- ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪಿಎಸ್‌ಟಿ ಮತ್ತು ಜಿಪಿಟಿ ವೃಂದದ ಒಟ್ಟು 36,944 ಅತಿಥಿ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಗಾಗಿ ಹಂಚಿಕೆ ಮಾಡಲಾಗಿದೆ.
- ವಿದ್ಯಾರ್ಥಿ-ಶಿಕ್ಷಕರ ಅನುಪಾತದ ನಿಯಮಗಳಿಗನುಸಾರವಾಗಿ ಮತ್ತು ಪಾರದರ್ಶಕವಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ
ಬೆಂಗಳೂರು: ರಾಜ್ಯದಲ್ಲಿ ಒಟ್ಟು 6,617 ಅತಿಥಿ ಶಿಕ್ಷಕರ ಹುದ್ದೆಗಳನ್ನು ಎರಡನೇ ಹಂತದಲ್ಲಿ ಮಂಜೂರು ಮಾಡಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ಶಿಕ್ಷಣ ಇಲಾಖೆಯ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು 40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮೋದನೆ ನೀಡಿತ್ತು. ಇದರಂತೆ ಮೊದಲ ಹಂತದಲ್ಲಿ ಪಿಎಸ್‌ಟಿ ಮತ್ತು ಜಿಪಿಟಿ ವೃಂದದ 30,337 ಅತಿಥಿ ಶಿಕ್ಷಕರನ್ನು ಖಾಲಿ ಇರುವ ಶಿಕ್ಷಕರ ಹುದ್ದೆಗೆ ಎದುರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಜಿಲ್ಲೆಗಳ ಉಪನಿರ್ದೇಶಕರು ಹೆಚ್ಚುವರಿಯಾಗಿ ಶಿಕ್ಷಕರ ಅಗತ್ಯ ಇರುವ ಬಗ್ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಪಿಎಸ್‌ಟಿ ಮತ್ತು ಜಿಪಿಟಿ ವೃಂದದ 6,617 ಅತಿಥಿ ಶಿಕ್ಷಕರನ್ನು ಮಂಜೂರು ಮಾಡಲಾಗಿದೆ.
ಈ ಮೂಲಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪಿಎಸ್‌ಟಿ ಮತ್ತು ಜಿಪಿಟಿ ವೃಂದದ ಒಟ್ಟು 36,944 ಅತಿಥಿ ಶಿಕ್ಷಕರ ಹುದ್ದೆಗಳನ್ನು ನೇಮಕಾತಿಗಾಗಿ ಹಂಚಿಕೆ ಮಾಡಲಾಗಿದೆ.
ವಿದ್ಯಾರ್ಥಿ-ಶಿಕ್ಷಕರ ಅನುಪಾತದ ನಿಯಮಗಳಿಗನುಸಾರವಾಗಿ ಮತ್ತು ಪಾರದರ್ಶಕವಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ನೇಮಕ ಸಂದರ್ಭದಲ್ಲಿ ತಾಲೂಕು ಅಥವಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ನೇರ ಹೊಣೆಗಾರರಾಗಿದ್ದು, ಯಾವುದೇ ಲೋಪದೋಷಗಳಾದಲ್ಲಿ ಕಟ್ಟುನಿಟ್ಟಿನ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ ವಿಭಾಗಕ್ಕೆ ಗರಿಷ್ಠ 13,324 ಅತಿಥಿ ಶಿಕ್ಷಕರು ಮಂಜೂರಾಗಿದ್ದಾರೆ. ರಾಯಚೂರಿಗೆ ರಾಜ್ಯದಲ್ಲೇ ಗರಿಷ್ಠ 3,754 ಮತ್ತು ಯಾದಗಿರಿಗೆ 2,440 ಅತಿಥಿ ಶಿಕ್ಷಕರ ಮಂಜೂರಾಗಿದೆ. ಉಳಿದಂತೆ ಬೆಳಗಾವಿ ವಿಭಾಗಕ್ಕೆ 10,336, ಬೆಂಗಳೂರು 8,252 ಮತ್ತು ಮೈಸೂರಿಗೆ 5,033 ಅತಿಥಿ ಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲಿ ಈವರೆಗೆ ಮಂಜೂರಾಗಿದ್ದಾರೆ.