- 16.75 ಕಿಮೀ ಉದ್ದದ ಮಹತ್ವದ ಟನಲ್ ರಸ್ತೆ ಯೋಜನೆಗೆ ಟೆಂಡರ್
- ಅದಾನಿ ಸಮೂಹವೇ ಲೋವೆಸ್ಟ್ ಬಿಡ್ಡರ್
- ಬಿಜೆಪಿಯ ಆರ್ಥಿಕ ಬೆನ್ನೆಲುಬು ಅದಾನಿ ಸಮೂಹವೇ ಬಿಡ್ಡಿಂಗ್ನಲ್ಲಿ ಗೆಲುವು
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ 16.75 ಕಿಮೀ ಉದ್ದದ ಮಹತ್ವದ ಟನಲ್ ರಸ್ತೆ ಯೋಜನೆಗೆ ಟೆಂಡರ್ ಕರೆಯಲಾಗಿತ್ತು. ಸದಾ ಗೌತಮ್ ಅದಾನಿ ಅವರನ್ನು ಟೀಕಿಸಿ, ವಿರೋಧಿಸುವ 'ಕೈ' ಪಕ್ಷಕ್ಕೆ, ಇದೀಗ ಅವರ ಸಮೂಹದಿಂದಲೇ ಬಂದಿರುವ ಬಿಡ್ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ, ವಿವಾದಕ್ಕೀಡಾಗಿರುವ ಈ ಯೋಜನೆ ಈಗ ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದೇ ಕುತೂಹಲ.
ಬೆಂಗಳೂರಿನ ಭಾರೀ ಟ್ರಾಫಿಕ್ ಸಮಸ್ಯೆಗೆ ರಿಲೀಫ್ ನೀಡುವ ಉದ್ದೇಶದಲ್ಲಿ ಈ ಸುರಂಗ ರಸ್ತೆ ಯೋಜನೆಗೆ ಒತ್ತು ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮುಖಾಂತರ ಟೆಂಡರ್ಗೆ ಕರೆದಿದ್ದರು. ಇದರಲ್ಲಿ ಎರಡೂ ಪ್ಯಾಕೇಜ್‌ಗಳಿಗೆ ಅದಾನಿ ಗ್ರೂಪ್ ಅತ್ಯಂತ ಕಡಿಮೆ ಬಿಡ್ ಅನ್ನು ಸಲ್ಲಿಸಿದೆ. ವಿಶೇಷ ಎಂದರೆ, ರಾಜ್ಯ ಸರ್ಕಾರ ನೀಡಿರುವ ಅಂದಾಜು ವೆಚ್ಚಕ್ಕಿಂತ ಅದಾನಿ ಬಿಡ್ ತುಸು ಹೆಚ್ಚಿದೆ. ಇತರರಿಗಿಂತ ಅದಾನಿ ಗ್ರೂಪ್ಸ್ ನೀಡಿರುವ ಆಫರ್ ಸರ್ಕಾರಕ್ಕೆ ಕೈಗೆಟುಕುವಂತಿದೆ.
ಮೊದಲ ಪ್ಯಾಕೇಜ್‌ಗೆ ಸುಮಾರು ಶೇ.24ರಷ್ಟು ಮತ್ತು ಎರಡನೆಯದಕ್ಕೆ ಶೇ.28ರಷ್ಟು ಎನ್ನಲಾಗಿದೆ. ಅದಾನಿ ಸಮೂಹದಿಂದ ಬಂದಿರುವ ಲೋವೆಸ್ಟ್ ಬಿಡ್ಡಿಂಗ್ ಬಗ್ಗೆ ರಾಜ್ಯ ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂಬುದೇ ಸದ್ಯ ರೋಚಕ. ಅಂತಿಮ ನಿರ್ಧಾರಕ್ಕಾಗಿ ಕರ್ನಾಟಕ ಸಚಿವ ಸಂಪುಟದ ಮುಂದೆ ಈ ಟೆಂಡರ್‌ಗಳನ್ನು ಮುಂದಿಡುವ ಅನಿವಾರ್ಯತೆ ಇದೆ. ಸರ್ಕಾರವು ಒಟ್ಟು ಯೋಜನಾ ವೆಚ್ಚವನ್ನು 17,698 ಕೋಟಿ ರೂ.ಗೆ ನಿಗದಿಪಡಿಸಿದ್ದರೂ, ಅದಾನಿ ಗ್ರೂಪ್ ಇಡೀ ಯೋಜನೆಗೆ 22,267 ಕೋಟಿ ರೂ. ಹಣವನ್ನು ಬಿಡ್ಡಿಂಗ್ನಲ್ಲಿ ಕೇಳಿದೆ. ಕೇವಲ ಇಬ್ಬರು ಬಿಡ್ಡರ್‌ಗಳ ಪೈಕಿ, ಅದಾನಿ ಗ್ರೂಪ್ ಅತ್ಯಂತ ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿದರೆ, ಎರಡನೇ ಸ್ಥಾನದಲ್ಲಿ ವಿಶ್ವ ಸಮುದ್ರ ಗ್ರೂಪ್ ಇದೆ.
ಅದಾನಿ ವಿರುದ್ಧದ 'ಕೈ'ಗೆ ಅನಿವಾರ್ಯ?
ರಾಷ್ಟ್ರಮಟ್ಟದಲ್ಲಿ ಸದಾ ಅದಾನಿ ವಿರುದ್ಧ ನೇರವಾಗಿ ಗುಡುಗುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು, ಇದೀಗ ಅವರ ಸರ್ಕಾರವೇ ಅದಾನಿ ಸಮೂಹದಿಂದ ಬಂದಿರುವ ಬಿಡ್ಗೆ ಮಣೆ ಹಾಕುತ್ತಾರಾ ಎಂಬ ಪ್ರಶ್ನೆ ಉದ್ಬವಿಸಿದೆ. ಸರ್ಕಾರ ನೀಡಿರುವ ಅಂದಾಜು ಮೊತ್ತಕ್ಕಿಂತ ಹೆಚ್ಚಿನ ಬಿಡ್ ಅದಾನಿ ಗ್ರೂಪ್ಸ್ನಿಂದ ಆಗಿರುವುದರಿಂದ ಟೆಂಡರ್ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಬಹುದು. ಇಲ್ಲವೇ, ರದ್ದಾಗಿ ಹೊಸದಾಗಿ ಆರಂಭವಾಗಬಹುದು. ಅಷ್ಟಕ್ಕೂ, ಇದು ಸರ್ಕಾರಕ್ಕೆ ಬಿಟ್ಟ ನಿರ್ಧಾರ ಎಂಬುದು ಇಲ್ಲಿ ಗಮನಾರ್ಹ. ಅಸಲಿಗೆ, ಟೆಂಡರ್ ಅನ್ನು ಅದಾನಿ ಸಮೂಹಕ್ಕೆ ಕೊಟ್ಟಿದ್ದೇ ಆದರೂ ಕಾಂಗ್ರೆಸ್ ಸರ್ಕಾರ ಭಾರೀ ಮುಜುಗರಕ್ಕೆ ಸಿಲುಕಬಹುದು ಎಂಬ ಮಾತುಗಳಿವೆ.
ಇತ್ತ ಬಿಜೆಪಿ ವಿರೋಧ, ಅತ್ತ ಅದಾನಿ ಬಿಡ್!
ಟನಲ್ ರಸ್ತೆ ಯೋಜನೆ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದ ಮೊದಲ ದಿನದಿಂದಲೂ ರಾಜ್ಯ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಸಾಕಷ್ಟು ವೇದಿಕೆ, ಕಾರ್ಯಕ್ರಮಗಳಲ್ಲಿ ಕಮಲ ನಾಯಕರು ಸುರಂಗ ಯೋಜನೆಯನ್ನು ಧಿಕ್ಕರಿಸುತ್ತ ಬಂದಿದ್ದಾರೆ. ಹೀಗಿರುವಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ, ಬಿಜೆಪಿಗೆ ಆರ್ಥಿಕ ಬೆನ್ನೆಲುಬಾಗಿರುವ ಅದಾನಿ ಅವರ ಸಮೂಹವೇ ಬಿಡ್ಡಿಂಗ್ನಲ್ಲಿ ಮೇಲುಗೈ ಸಾಧಿಸಿರುವುದು ಸದ್ಯ ಗೊಂದಲಕ್ಕೆ ದೂಡಿದೆ. ಅದಾನಿ ತೆಗೆದುಕೊಂಡಿರುವ ನಿರ್ಧಾರವನ್ನು ಬಿಜೆಪಿ ಒಪ್ಪಲಿದೆಯೇ? ಅಥವಾ ವಿರೋಧಿಸಲಿದೆಯೇ? ಅಷ್ಟಕ್ಕೂ ತೆಗೆದುಕೊಳ್ಳುವ ನಿಲುವೇನು? ಎಂಬ ಕುತೂಹಲ ಹಲವರಲ್ಲಿ ಮೂಡಿದೆ,(ಏಜೆನ್ಸೀಸ್).