ಮೃತ ವೈಶಾಕ್, ಸ್ನೇಹಿತೆ ಕೃಷಿ ತಾಪಂಡ್
ಬೆಂಗಳೂರು: ನಗರದಲ್ಲಿ ತ್ರಿವಳಿ ಕೊಲೆ ನಡೆದ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ, ಸ್ಯಾಂಡಲ್‌ವುಡ್ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್ ಮನೆಯಲ್ಲಿ ಆಕೆಯ ಸ್ನೇಹಿತ, ಉದ್ಯಮಿ ವೈಶಾಕ್(45) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿರುವ ಕೃಷಿ ತಾಪಂಡ ಫ್ಲ್ಯಾಟ್‌ನಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಆತ್ಮಹತ್ಯೆ ನಡೆದಿದೆ. ಈ ಸಂಬಂಧ ವೈಶಾಕ್ ಪತ್ನಿ ಮೇಘಾ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಘಟನೆಗೆ ಯಾರೂ ಕಾರಣರಲ್ಲ ಎಂದು ದೂರು ನೀಡಿದ್ದಾರೆ. ಆರ್.ಆರ್.ನಗರ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗಿರಿನಗರ ನಿವಾಸಿ ವೈಶಾಕ್ 15 ವರ್ಷಗಳ ಹಿಂದೆ ಮೇಘಾ ಎಂಬವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ 14 ವರ್ಷದ ಮಗ ಇದ್ದಾನೆ. ವೈಶಾಕ್ ಗಿರಿನಗರದಲ್ಲಿ ಆಟೋ ಮೊಬೈಲ್ಸ್ ಅಂಗಡಿ ಹಾಗೂ ಗ್ಯಾರೆಜ್ ನಡೆಸುತ್ತಿದ್ದರು. ಎರಡೂವರೆ ವರ್ಷಗಳಿಂದ ನಟಿ ಕೃಷಿ ತಾಪಂಡ ಪರಿಚಯವಾಗಿತ್ತು. ಇಬ್ಬರು ಆತ್ಮೀಯವಾಗಿದ್ದರು. ಹೀಗಾಗಿ ಆಗಾಗ್ಗೆ ನಟಿ ಮನೆಗೆ ವೈಶಾಕ್ ಬಂದು ಹೋಗುತ್ತಿದ್ದರು ಎಂಬುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ.
ತಿಂಗಳಿಂದ ಕೃಷಿ ಮನೆಯಲ್ಲಿದ್ದ ವೈಶಾಕ್:
ಕೌಟುಂಬಿಕ ವಿಚಾರವಾಗಿ ವೈಶಾಕ್ ದಂಪತಿ ನಡುವೆ ಜಗಳ ನಡೆದಿದ್ದು, ಇಬ್ಬರು ಮಾತನಾಡುತ್ತಿರಲಿಲ್ಲ. ಆದ್ದರಿಂದ ಕಳೆದ ಒಂದು ತಿಂಗಳಿಂದ ಸ್ನೇಹಿತೆ ಕೃಷಿ ತಾಪಂಡ ಮನೆಯಲ್ಲೇ ವಾಸವಾಗಿದ್ದರು. ಅಲ್ಲಿಂದಲೇ ಗ್ಯಾರೆಜ್‌ಗೆ ಹೋಗುತ್ತಿದ್ದರು. ಅಲ್ಲದೆ, ಫ್ಲ್ಯಾಟ್‌ನ ಎರಡು ಕೀಗಳ ಪೈಕಿ ಒಂದು ಕೀ ವೈಶಾಕ್ ಬಳಿ ಇತ್ತು. ಹೀಗಾಗಿ ಬುಧವಾರ ರಾತ್ರಿ ಯಾರು ಇಲ್ಲದ ವೇಳೆ ಫ್ಲ್ಯಾಟ್‌ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಬದುಕಲು ಇಷ್ಟ ಇಲ್ಲ ಎಂಬ ಸಂದೇಶ:
ಒಂದು ವಾರದಿಂದ ವೈಶಾಕ್ ಖಿನ್ನತೆಯಲ್ಲಿದ್ದರು, ಆತನಿಗೆ ಸ್ನೇಹಿತೆ ಕೃಷಿ ಸಮಾಧಾನ ಮಾಡಿದ್ದರು. ಆದರೆ, ಬುಧವಾರ ಸಂಜೆ, ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟ ಇಲ್ಲ ಎಂದು ಬೇಸರದ ಸಂದೇಶ ಕಳುಹಿಸಿದ್ದ. ಕಾರ್ಯನಿಮಿತ್ತ ನೆಲಮಂಗಲ ಬಳಿಯಿದ್ದ ನಟಿ ಅದಕ್ಕೆ ಪ್ರತಿಕ್ರಿಯಿಸಿ, ಧೈರ್ಯ ತುಂಬಿ, ನಾನು ಮನೆಗೆ ಬರೋವರೆಗೂ ಯಾವುದೇ ನಿರ್ಧಾರ ಕೈಗೊಳ್ಳಬೇಡ. ಇಬ್ಬರು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ. ಮನಸ್ಸು ಹಗುರ ಆಗಲಿದೆ ಎಂದಿದ್ದರು. ಅದಕ್ಕೆ ವೈಶಾಖ್ ಕೂಡ ಒಪ್ಪಿಕೊಂಡಿದ್ದರು. ಆದರೂ ರಾತ್ರಿ 8 ಗಂಟೆ ಬಳಿಕ ಮತ್ತೊಮ್ಮೆ ಸ್ನೇಹಿತೆಗೆ ವೈಶಾಕ್ ಕರೆ ಮಾಡಿದ್ದಾನೆ. ಆದರೆ, ನಟಿ ಕಾಲ್ ರಿಸೀವ್ ಮಾಡಿಲ್ಲ. 8.30ಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದ. ಕೂಡಲೇ ಗಾಬರಿಗೊಂಡ ನಟಿ, ಆತನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮನೆ ಬಳಿ ಬಂದ ನಟಿ, ಬಾಗಿಲು ತೆರೆದು ಆಕೆಯ ಸೀರೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಪೊಲೀಸರು ಮನೆ ಹಾಗೂ ವೈಶಾಕ್ ಮೊಬೈಲ್ ಪರಿಶೀಲಿಸಿದಾಗ ಯಾವುದೇ ಡೆತ್‌ನೋಟ್ ಅಥವಾ ವಿಡಿಯೋಗಳು ಪತ್ತೆ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಪ್ರರಕಣದಲ್ಲಿ ಜೈಲಿಗೆ ಹೋಗಿದ್ದ ವೈಶಾಕ್
ಕೆಲ ತಿಂಗಳ ಹಿಂದೆ ಎವಿಆರ್ ಸಂಸ್ಥೆ ಮಾಲೀಕ ಅರವಿಂದ್ ರೆಡ್ಡಿ ಮತ್ತು ಅವರ ಮಾಜಿ ಪ್ರೇಯಸಿ ಕೃಷಿ ತಾಪಂಡ ನಡುವೆ ಗಲಾಟೆಯಾಗಿತ್ತು. ಅರವಿಂದ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಿದ್ದರು. ನಂತರ ಅರವಿಂದ್ ರೆಡ್ಡಿ, ನಟಿ ಜತೆಗಿನ ಪೋಟೋಗಳನ್ನು ಹಾಕಿ ಗಲಾಟೆಗೆ ಕಾರಣ ತಿಳಿಸಿದ್ದರು. ಈ ವೇಳೆ ವೈಶಾಕ್, ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಪತ್ರ ಬರೆದು, ತನ್ನ ಸ್ನೇಹಿತೆಯ ಫೋಟೋ ವೈರಲ್ ಮಾಡಿರುವುದಕ್ಕೆ ಕ್ಷೇಮೆ ಕೇಳಬೇಕು ಹಾಗೂ ಇಂತಿಷ್ಟು ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದರು. ಈ ಸಂಬಂಧ ಅರವಿಂದ್ ರೆಡ್ಡಿ ಎಚ್‌ಎಎಲ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ವೈಶಾಕ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ರು. ಕೆಲ ದಿನಗಳ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ದೂರಿನಲ್ಲಿ ಏನಿದೆ ?
ಬುಧವಾರ ರಾತ್ರಿ 11ರ ಸುಮಾರಿಗೆ ಕೃಷಿ ತಾಪಂಡ ಫ್ಲ್ಯಾಟ್‌ನಲ್ಲಿ ಪತಿ ಆತ್ಮಹತ್ಯೆ ಬಗ್ಗೆ ಪೊಲೀಸರ ಕರೆ ಮಾಡಿ ಮಾಹಿತಿ ನೀಡಿದ್ದರು. ನನ್ನ ಹಾಗೂ ಪತಿ ಮಧ್ಯೆ ಗಲಾಟೆಯಾಗಿತ್ತು. ತಿಂಗಳಿಂದ ಅವರೊಂದಿಗೆ ಮಾತನಾಡುತ್ತಿರಲಿಲ್ಲ. ಮೊಬೈಲ್ ಸಂದೇಶದ ಮೂಲಕ ಮಗನ ಬಗ್ಗೆ ವಿಚಾರಿಸುತ್ತಿದ್ದರು. ಆದರೆ ನನ್ನ ಬಗ್ಗೆ ಏನೂ ಕೇಳಿರಲಿಲ್ಲ. ವೈಶಾಕ್ ಆತ್ಮಹತ್ಯೆ ಕುರಿತು ನಮಗೆ ಯಾರ ಮೇಲೂ ಅನುಮಾನವಿಲ್ಲ. ನಟಿ ಕೃಷಿ ತಾಪಂಡ ಮತ್ತು ಪತಿ ವೈಶಾಕ್ ಆತ್ಮೀಯ ಸ್ನೇಹಿತರು. ಹೀಗಾಗಿ ಅವರ ಮನೆಗೆ ಹೋಗುತ್ತಿದ್ದರು. ಆದರೂ ಆತ್ಮಹತ್ಯೆಗೆ ಶರಣಾಗಿರುವ ಪತಿ ವೈಶಾಕ್ ಮರಣೋತ್ತರ ಪರೀಕ್ಷೆ ನಡೆಸಿ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುವಂತೆ ಮೇಘನಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂತ್ಯಕ್ರಿಯೆಗೆ ಆಗಮಿಸಿದ್ದಕ್ಕೆ ಆಕ್ಷೇಪ
ಮೃತ ವೈಶಾಕ್ ಮೃತ ದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಚಾಮರಾಜಪೇಟೆಯಲ್ಲಿ ವೈಶಾಕ್ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಕೃಷಿ ತಾಪಂಡ ಆಗಮಿಸಿದ್ದರು. ಆದರೆ, ವೈಶಾಕ್ ಕುಟುಂಬಸ್ಥರು ನಟಿ ಕೃಷಿ ಅಂತ್ಯಕ್ರಿಯೆಗೆ ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.