* ಮಾನವ ಸರಪಳಿ ನಿರ್ಮಿಸಿ ಆಕ್ರೋಶ
* ಧರಣಿ ಮುಂದುವರೆಸುವ ಎಚ್ಚರಿಕೆ
ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯು 7ನೇ ದಿನಕ್ಕೆ ಕಾಲಿಟ್ಟಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಸುವ ತನಕ ಧರಣಿ ಮುಂದುವರೆಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಪಕ್ಷ ನಾಯಕರು, ಮಾಜಿ ಶಾಸಕರು, ವಿವಿಧ ಸಂಘಟನೆಗಳ ಮುಖಂಡರು, ಸಿನಿ ತಾರೆಯರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವಂತೆ ಪರೋಕ್ಷವಾಗಿ, ಪ್ರತ್ಯೇಕ್ಷವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಐಯುಟಿಯುಸಿ ಅಧ್ಯಕ್ಷ ಕೆ. ರಾಧಾಕೃಷ್ಣ ಮಾತನಾಡಿ, ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಗೆ ಬೆಲೆಯಿಲ್ಲದಂತಾಗಿದೆ. ಸರ್ಕಾರ ಆಶಾಗಳನ್ನು ಗೌರವದಿಂದ ಕಾಣುತ್ತಿಲ್ಲ ಮೋಸ ವಾಡಿದೆ. ಮುಂದಿನ ಅಧಿವೇಶನದ ವರೆಗೂ ಧರಣಿ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ರೈತ ಸೇನೆ ಅಧ್ಯಕ್ಷ ಸುಷ್ಮಾ ಶ್ರೀನಿವಾಸ್ ಮಾತನಾಡಿ, ಕಾರ್ಯಕರ್ತರ ಕಾರ್ಯ ದಿನಕ್ಕೆ 2 ತಾಸು ಮಾತ್ರ ಎಂದು ಸರ್ಕಾರ ವ್ಯಂಗ್ಯವಾಡಿದೆ. ಪ್ರತಿನಿಧಿಗಳು ಎಂದಾದರೂ ವಸ್ತುಸ್ಥಿತಿಯನ್ನು ಬಲ್ಲವರಾಗಿದ್ದಾರೆಯೇ. ಮಹಿಳೆ ಗರ್ಭಿಣಿಯಾದ ತಕ್ಷಣ ಮೊದಲು ಅವರನ್ನು ವಿಚಾರಿಸುವುದೇ ಆಶಾ ಕಾರ್ಯಕರ್ತೆ. ಇಂತಹ ಆಶಾಗಳ ಸಮಸ್ಯೆಗೆ ಪರಿಹಾರ ಸಿಗುವುದು ಯಾವಾಗ. ಸಾವಿರಾರು ಹೆಣ್ಣು ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು, ಸಿಎಂ ಡಿ.ಕೆ.ಶಿವಕುಮಾರ್, ಸಚಿವರು ವಿದೇಶಕ್ಕೆ ಹೋಗಿರುವುದು ಯಾವ ಲಾಭಕ್ಕಾಗಿ ಎಂದು ಕಿಡಿಕಾರಿದರು.
ನಟರಾದ ಆದಿತ್ಯ ವಿನೋದ್, ಗೌತಮಿ ಜಾಧವ್, ಬಿಬಿಎಂಪಿ ಮಹಿಳಾ ಕಾರ್ಮಿಕರಾದ ಪುಷ್ಪಾ, ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್ ಯಾದಗಿರಿ, ಕಾರ್ಯದರ್ಶಿ ನಾಗಲಕ್ಷ್ಮಿ, ಉಪಾಧ್ಯಕ್ಷೆ ಟಿ.ಸಿ.ರಮಾ, ಚಂದ್ರಕಲಾ, ಶಿಲ್ಪ, ಅಮರವತಿ ಹೋರಾಟಗಾರ್ತಿ ಎಲ್.ಸುನೀತಾಬಾಯಿ ಮತ್ತಿತರರು ಉಪಸ್ಥಿತರಿದ್ದರು.
ಹೋರಾಟಕ್ಕೆ ಸ್ಪಂದಿಸಲು ಒತ್ತಾಯ
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸುವುದು ಸರಿಯಲ್ಲ. ಬೇಡಿಕೆಗಳ ಈಡೇರಿಕೆಗಾಗಿ ಆಶಾ ಸಹೋದರಿಯರು ಹಗಲು ರಾತ್ರಿ ಎನ್ನದೇ ಪ್ರತಿಭಟನೆ ನಡೆಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರದ ನಡೆ ನಿಜಕ್ಕೂ ಅವಾನವೀಯ. ಹೋರಾಟಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಂದಿಸಿ ತಕ್ಷಣ ಈಡೇರಿಸಬೇಕು ಎಂದು ಮಾಜಿ ಶಾಸಕಿ ಅನಿತಾ ಕುವಾರಸ್ವಾಮಿ ಒತ್ತಾಯಿಸಿದ್ದಾರೆ.
ಭರವಸೆ ನೀಡಿ ಕೈ ಕೊಟ್ಟ ಸರ್ಕಾರ
ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಆಶಾ ಕಾರ್ಯಕರ್ತೆಯರನ್ನು ಕರೆದು ಗೌರವ ಧನ ಹೆಚ್ಚಿಸುವ ಭರವಸೆ ನೀಡಿದ್ದರು. ಈಗ ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಕುಳಿತರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಆಶಾ ಕಾರ್ಯುಕರ್ತೆಯರು ಕೊರೆಯುವ ಚಳಿಯಲ್ಲಿ ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ನಲ್ಲಿ ಧರಣಿಗೆ ಕುಳಿತರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಂದಿಸಿಲ್ಲ. ತಾಯಂದಿರು ಮಕ್ಕಳಿಗೆ ಹಾಲು ಕುಡಿಸುವ ವ್ಯವಸ್ಥೆಯಾಗಲೀ, ಶೌಚಗೃಹವಾಗಲೀ, ಕುಡಿಯುವ ನೀರಿನ ವ್ಯವಸ್ಥೆಯಾಗಲೀ ಯಾವುದನ್ನೂ ಮಾಡಿಲ್ಲ. 10 ಸಾವಿರ ಮಹಿಳೆಯರಿಗೆ ಕೇವಲ 8 ಶೌಚಗೃಹ ಇವೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಬೆಂಗಳೂರು ಹಬ್ಬ ಮಾಡಲು ಮುಂದಾಗಿದ್ದಾರೆ. ಆಶಾ ಕಾರ್ಯಕರ್ತರ ಗೌರವಧನಕ್ಕಾಗಿ ಹಣ ಇಲ್ಲ, ರೈತರಿಗೆ ಬರ ಪರಿಹಾರ ನೀಡಿಲ್ಲ. ಆಡಂಬರದ ದಸರಾ ಬೇಡವೆಂದರೂ ಅದಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಯಿತು. ಸಿಎಂ ನಿವಾಸ, ಕಚೇರಿಗೆ ಖರ್ಚು ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರೋಪಿಸಿದರು.
ಬೇಡಿಕೆ ಈಡೇರಿಸಲು ಎಚ್ಡಿಕೆ ಆಗ್ರಹ
ಫ್ರೀಡಂ ಪಾರ್ಕ್ನಲ್ಲಿ ಹಗಲು-ರಾತ್ರಿ ಎನ್ನದೆ ಚಳಿಯಲ್ಲಿಯೂ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸೇವೆ ಮತ್ತು ಶ್ರಮದ ಬಗ್ಗೆ ಎಲ್ಲರೂ ಅನುಕಂಪದ ಮಾತುಗಳನ್ನಾಡುತ್ತಿರುವುದನ್ನು ಬಿಟ್ಟರೆ ಬೇರೇನು ಆಗಿಲ್ಲ. ಒಂದು ವಾರದಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಅವರ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹೀಗಾಗಿ ಗೌರವಧನ ಹೆಚ್ಚಳ ಸೇರಿದಂತೆ ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು.
ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಆರ್ಥಿಕ ಇಲಾಖೆಯೂ ಸಿಎಂ ಬಳಿಯೇ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯಲಿ ಎಂದರು.
18 ಮಂದಿಗೆ ಚಿಕಿತ್ಸೆ
ಚಳಿಯ ನಡುವೆಯೂ ಕಳೆದ 7 ದಿನಗಳಿಂದ ಧರಣಿ ನಡೆಸುತ್ತಿರುವವರ ಪೈಕಿ 18 ಮಂದಿ ಕಾರ್ಯಕರ್ತರು ಜ್ವರ, ತಲೆನೋವು, ನೆಗಡಿ, ಕೆಮ್ಮಿಗೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಮಲ್ಲೇಶ್ವರ ಕೆ.ಸಿ.ಜನರಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತಿಭಟನಾ ಸ್ಥಳದಲ್ಲೇ ನಡೆದ ಆರೋಗ್ಯ ಶಿಬಿರದಲ್ಲಿ 2,500ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾಗಿದ್ದಾರೆ.
ಬೇಡಿಕೆಗಳೇನು...?:
ಮಾಸಿಕ 15 ಸಾವಿರ ಗೌರವಧನ ನೀಡಬೇಕು. ಮೊಬೈಲ್ ಆ್ಯಪ್ ಮೂಲಕ ಕೆಲಸ ಮಾಡಿಸುವುದನ್ನು ಕೈಬಿಡಬೇಕು, ಮೊಬೈಲ್ ಕೆಲಸಕ್ಕೆ ಪ್ರೋತ್ಸಾಹಧನ ನಿಗದಿಪಡಿಸಬೇಕು. ಮೊಬೈಲ್ ಬಳಕೆ ಮಾಡಲು ಬಾರದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
ನಿವೃತ್ತಿ ಹೊಂದಿರುವ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು. ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಕಾರ್ಯಕರ್ತರ ತರಬೇತಿಗೆ 5 ಸಾವಿರ ವಿಶೇಷ ಪ್ರೋತ್ಸಾಹ ನೀಡಬೇಕು. ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ನಿಶ್ಚಿತ ಗೌರವಧನ, ನಿಗದಿತ ಪ್ರೋತ್ಸಾಹಧನ ನೀಡಬೇಕು.