Action will be taken if sewage is discharged illegally.
ಚಿಂತಾಮಣಿ: ಗೋಪಸಂದ್ರ ಕೆರೆಯ ಬಳಿ ಯುಜಿಡಿ ಮ್ಯಾನ್ಹೋಲ್ಗಳಿಗೆ ಮರಳು ಮೂಟೆ ಅಡ್ಡಹಾಕಿ ಪೈಪ್ಗಳ ಮೂಲಕ ಕೊಳಚೆ ನೀರನ್ನು ಅಕ್ರಮವಾಗಿ ಜಮೀನುಗಳಿಗೆ ಹರಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
ಗೋಪಸಂದ್ರ ಕೆರೆ ಮತ್ತು ಸಮೀಪದ ಮ್ಯಾನ್ಹೋಲ್ ಬಳಿ ಅಕ್ರಮವಾಗಿ ಅಳವಡಿಸಿದ್ದ ಪೈಪ್ಗಳು ಹಾಗೂ ಮೋಟಾರ್ಗಳನ್ನು ನಗರಸಭೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಪೌರಾಯುಕ್ತ ಮಾತನಾಡಿ, ನಗರದ ಯುಜಿಡಿ ನೀರು ಗೋಪಸಂದ್ರ ಕೆರೆಗೆ ಸೇರಬಾರದು ಮತ್ತು ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಶಾಸಕ ಡಾ.ಎಂ.ಸಿ.ಸುಧಾಕರ್ ಅವರು ಕಾಳಜಿವಹಿಸಿ ಎಸ್ಟಿಪಿ (ತ್ಯಾಜ್ಯ ನೀರು ಶುದ್ಧೀಕರಣ ಟಕ) ಸ್ಥಾಪಿಸಿದ್ದಾರೆ. ಯುಜಿಡಿ ನೀರನ್ನು ಸದ್ಯ ಈ ಟಕಕ್ಕೆ ಹರಿಸಲಾಗುತ್ತಿದೆ. ಆದರೆ ಕೆಲವರು ಯುಜಿಡಿ ಮ್ಯಾನ್ಹೋಲ್ಗಳಿಗೆ ಕಲ್ಲು ಹಾಗೂ ಮರಳು ಮೂಟೆಗಳನ್ನು ಹಾಕಿ ನೀರು ಮುಂದಕ್ಕೆ ಹರಿಯದಂತೆ ತಡೆಯುತ್ತಿದ್ದಾರೆ. ಬಳಿಕ ಪೈಪ್ಗಳ ಮೂಲಕ ಅಕ್ರಮವಾಗಿ ಜಮೀನುಗಳಿಗೆ ಹರಿಸಿಕೊಳ್ಳುತ್ತಿರುವುದು ಕಂಡುಬಂದಿದೆ ಎಂದರು.
ಮ್ಯಾನ್ಹೋಲ್ಗಳಿಗೆ ಅಡ್ಡಲಾಗಿ ಕಲ್ಲು, ಮರಳು ಮೂಟೆ ಹಾಕುವುದರಿಂದ ಇಡೀ ಯುಜಿಡಿ ವ್ಯವಸ್ಥೆ ಹಾಳಾಗುತ್ತಿದೆ. ಪೈಪ್ಗಳಲ್ಲಿ ಕೊಳಚೆ ನೀರು ತುಂಬಿ ಮ್ಯಾನ್ಹೋಲ್ಗಳ ಮೂಲಕ ರಸ್ತೆಗೆ ಚಿಮ್ಮುತ್ತಿದೆ. ಇದರಿಂದ ಇಡೀ ಪರಿಸರ ದುರ್ವಾಸನೆಯಿಂದ ಕೂಡಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಪೌರಾಯುಕ್ತರು ಬೇಸರ ವ್ಯಕ್ತಪಡಿಸಿದರು.
ಕೆರೆ, ಕೊಳಚೆ ನೀರನ್ನು ಪಂಪ್ ಮೋಟಾರ್ ಮೂಲಕ ಜಮೀನುಗಳಿಗೆ ಹರಿಸಿಕೊಳ್ಳುತ್ತಿದ್ದವರ ಮೋಟಾರ್ ಹಾಗೂ ಪೈಪ್ಗಳನ್ನು ಜಪ್ತಿ ಮಾಡಲಾಗಿದೆ. ತಪ್ಪು ಮಾಡಿದವರ ವಿರುದ್ಧ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುವುದು. ಅಕ್ರಮ ನಡೆದಿರುವ ಜಾಗ ನಗರಸಭೆ ವ್ಯಾಪ್ತಿಯಲ್ಲಿದ್ದರೆ ನಾನೇ ನೇರವಾಗಿ ದೂರು ನೀಡುತ್ತೇನೆ. ಒಂದು ವೇಳೆ ಗ್ರಾಪಂ ವ್ಯಾಪ್ತಿಯಲ್ಲಿದ್ದರೆ ಪಿಡಿಒ ಮೂಲಕ ದೂರು ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಊಲವಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿ, ಯುಜಿಡಿ ನೀರಿಗೆ ಕೆಲವರು ಅಕ್ರಮವಾಗಿ ಪೈಪ್ ಅಳವಡಿಸಿಕೊಂಡಿರುವ ಮಾಹಿತಿ ಸಿಕ್ಕ ತಕ್ಷಣವೇ ಪೌರಾಯುಕ್ತರ ಗಮನಕ್ಕೆ ತಂದಿದ್ದೇನೆ. ಹಿರಿಯ ಅಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.