ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ 
ರಾಜ್ಯ

ಉ.ಕರ್ನಾಟಕಕ್ಕೆ ನೀರಾವರಿ ನಿಗಮಗಳ ಸ್ಥಳಾಂತರಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ ಭರವಸೆ- Minister Ramalinga Reddy promises

ಬೆಂಗಳೂರು: ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್) ಹಾಗೂ ಕೃಷ್ಣಾಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಪ್ರಾದೇಶಿಕ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸ್ಥಳಾಂತರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭರವಸೆ ಕೊಟ್ಟಿದ್ದಾರೆ.
ಕೃಷ್ಣಾಭಾಗ್ಯ ಜಲ ನಿಗಮದ ಕಚೇರಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಗೆ ಹಾಗೂ ಕರ್ನಾಟಕ ನೀರಾವರಿ ನಿಗಮದ ಪ್ರಾದೇಶಿಕ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಹೊರಡಿಸಿರುವ ಆದೇಶ ಮತ್ತು ನ್ಯಾಯಾಲಯದ ಕೊಟ್ಟಿರುವ ತೀರ್ಪು ಬಗ್ಗೆ ಮಾಹಿತಿ ನೀಡುವಂತೆ ಈಗಾಗಲೇ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.
ಕೃಷ್ಣಾಭಾಗ್ಯ ಜಲ ನಿಗಮ ಸ್ಥಳಾಂತರಿಸುವ ಸಲುವಾಗಿ ಅಲಮಟ್ಟಿಯಲ್ಲಿ ಹೊಸದಾಗಿ ಕಚೇರಿ ನಿರ್ಮಾಣ ಮಾಡಿರುವುದು, ಸ್ಥಳಾಂತರಕ್ಕೆ ಆದೇಶ ಹೊರಡಿಸಿ ಇಷ್ಟು ವರ್ಷವಾದರೂ ಕಾರ್ಯಗತವಾಗದಿರುವುದು, ಇದಕ್ಕೆ ಎದುರಾಗಿರುವ ಆಡಳಿತಾತ್ಮಕ ಕಾರಣಗಳೇನು? ಸೇರಿ ಇತ್ಯಾದಿ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯುತ್ತೇನೆ. ನೀರಾವರಿ ನಿಗಮಗಳ ಸ್ಥಳಾಂತರ ಕುರಿತು ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟರೆ ಖಂಡಿತವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಒಟ್ಟಿನಲ್ಲಿ ಉತ್ತರ ಕರ್ನಾಟಕದ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದು ಸಚಿವರು ಹೇಳಿದರು.