Action should be taken against those who hurt people's sentiments. 
ರಾಜ್ಯ

ಜನರ ಭಾವನೆಗೆ ಧಕ್ಕೆ ತರುವವರ ವಿರುದ್ಧ ಕ್ರಮವಾಗಲಿ

ಚಿಕ್ಕನಾಯಕನಹಳ್ಳಿ: ಕೊಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀರಾಮರ ಜನ್ಮದ ಬಗ್ಗೆ ಅತ್ಯಂತ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ.ಭಗವಾನರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಾಲೂಕು ವಿಶ್ವಹಿಂದೂ ಪರಿಷತ್​ ಹಾಗೂ ಬಜರಂಗದಳದಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ಪೊಲೀಸ್​ ಠಾಣೆಗೆ ದೂರು ಸಲ್ಲಿಸಲಾಯಿತು.
ಮುಖಂಡ ನರಸಿಂಹಮೂರ್ತಿ ಮಾತನಾಡಿ, ಇತ್ತೀಚೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿನ ಬಿ.ಕೃಷ್ಣಪ್ಪವನದಲ್ಲಿ ನಡೆದ ಪ್ರೊ.ಬಿ.ಕೃಷ್ಣಪ್ಪ ಹಾಗೂ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೆ.ಎಸ್​.ಭಗವಾನ್​ ಅವರು ಭಾಗವಹಸಿ ಹಿಂದೂ ಧರ್ಮ, ಪ್ರಭು ಶ್ರಿರಾಮಚಂದ್ರ ಹಾಗೂ ಹಿಂದೂ ಧರ್ಮಗ್ರಂಥಗಳ ಕುರಿತು ಅತ್ಯಂತ ಕೆಟ್ಟದಾಗಿ, ಅಶ್ಲೀಲ, ಅವಹೇಳನ ಹಾಗೂ ಪ್ರಚೋದನಕಾರಿಯಾಗಿ ಮಾತನಾಡಿ ಕೊಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಶ್ರೀರಾಮರು ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುತ್ರಕಾಮೇಷ್ಠಿಯಾಗದ ಸಂದರ್ಭದಲ್ಲಿನ ಪುರೋಹಿತರಿಗೆ ಹುಟ್ಟಿದ್ದು ಎಂದು ಅಸಂಬದ್ಧ ವ್ಯಾಖ್ಯಾನದ ಮೂಲಕ ಹಿಂದೂಗಳ ಭಾವನೆ ಕೆಡಿಸುವ ಉದ್ದೇಶದಿಂದ ಕಪೋಲಕಲ್ಪಿತ ಕಥೆಯನ್ನು ಕಟ್ಟಿ ಹೇಳಿದ್ದಾರೆ ಎಂದು ಆರೋಪಿಸಿದರು.
ಶ್ರೀರಾಮನನ್ನು ಪೂಜಿಸಬೇಡಿ, ಹಿಂದೂ ದೇವರು ಕೊಲೆ ಮಾಡುವ ದೇವರೆಂದು ಡಾ.ಅಂಬೇಡ್ಕರ್​ ಹೇಳಿದ್ದಾರೆ ಎಂದು ಹಾಗೂ ವಾಲ್ಮೀಕಿ ರಾಮಯಾಣದ ಬಗ್ಗೆ ತಪ್ಪು ಮಾಹಿತಿನೀಡಿ ಧರ್ಮಗ್ರಂಥವನ್ನು ಅಪಮಾನಿಸಿದ್ದಾರೆ. ಕೇವಲ ಪ್ರಗತಿಪರ ಚಿಂತಕನೆಂಬ ಹಣೆಪಟ್ಟಿ ಉಳಿಸಿಕೊಳ್ಳಲು ಇಂತಹ ಕೀಳು ಪ್ರಚಾರಕ್ಕಿಳಿದಿದ್ದಾರೆ. ಈತನನ್ನು ಈ ಹಿಂದಯೇ ನಿರ್ಲ್ಯಕ್ಷಿಸಿ ಆಚೆಗಿಟ್ಟಿದ್ದರೂ, ಮತ್ತೆ ಮತ್ತೆ ಮುನ್ನೆಲೆಗೆ ಬರಲು ಇಂತಹ ಕಾರ್ಯ ಮಾಡುತ್ತಿದ್ದಾನೆ ಎಂದು ದೂರಿದರು.
ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಹಿಂದೂ ದೇವರು, ಧಾರ್ಮಿಕ ಆಚರಣೆ ಹಾಗೂ ಧರ್ಮಗ್ರಂಥಗಳ ಅವಹೇಳನವನ್ನು ನಾವು ಸಹಿಸುವುದಿಲ್ಲ. ಇವರ ಭಾಷಣದ ವಿಡಿಯೋಗಳು, ಧ್ವನಿಮುದ್ರಣ, ಟಿ.ವಿ.ವಾಹಿನಿಗಳ ದೃಶ್ಯಗಳಗಳನ್ನು ಪರಿಶೀಲಿಸಿ ಪ್ರೊ. ಭಗವಾನ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.