ಪಿರಿಯಾಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೂತ್ ಕಮಿಟಿ ಸಭೆಯನ್ನು ಮಾಜಿ ಶಾಸಕ ಕೆ.ಮಹದೇವ್ ಉದ್ಘಾಟಿಸಿದರು. ಪಿ.ಎಂ.ಪ್ರಸನ್ನ, ಅಣ್ಣಯ್ಯ ಶೆಟ್ಟಿ, ದಾಕ್ಷಾಯಿಣಿ ಇತರರು ಇದ್ದಾರೆ.
ಪಿರಿಯಾಪಟ್ಟಣ: ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೂತ್ ಕಮಿಟಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ಮತ್ತು ಬಿಜೆಪಿಯವರು ಮತಚೋರಿ ಮಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅರ್ಹ ಮತದಾರರಿಗೆ ಅನ್ಯಾಯವಾಗಬಾರದು ಎಂದು ಎಸ್‌ಐಆರ್ ಪ್ರಕ್ರಿಯೆಯನ್ನು ಬೆಂಬಲಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಯಕರ್ತರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮವಾಗಲಿದೆ. ಇದನ್ನು ಅರಿತು ಕಾರ್ಯಕರ್ತರು ಶಿಸ್ತಿನ ಮೂಲಕ ಕಾರ್ಯ ನಿರ್ವಹಿಸಬೇಕು ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲು ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಒಂದೇ ವಾರ್ಡ್‌ನಲ್ಲಿ ಪಕ್ಷದ ಬೆಂಬಲಿತ ಇಬ್ಬರು ಅಥವಾ ಮೂವರು ಸ್ಪರ್ಧಿಸುವುದರಿಂದ ಮತಗಳು ವಿಭಜನೆಯಾಗಿ ವಿರೋಧ ಪಕ್ಷಗಳಿಗೆ ಲಾಭವಾಗುತ್ತದೆ. ಇದನ್ನು ತಪ್ಪಿಸಲು ಸ್ಥಳೀಯ ನಾಯಕರು ಹಾಗೂ ಹಿರಿಯರು ಒಟ್ಟಾಗಿ ಕುಳಿತು ಒಮ್ಮತದಿಂದ ಒಬ್ಬರೇ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಆ ಅಭ್ಯರ್ಥಿಯ ಗೆಲುವಿಗೆ ಇಡೀ ವಾರ್ಡ್‌ನ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಚಿಂತನೆಗಳು ಹಾಗೂ ಪಕ್ಷದ ಸಾಧನೆಗಳನ್ನು ಮನೆಮನೆಗೆ ತಲುಪಿಸಬೇಕು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯರು ಅಧಿಕಾರಕ್ಕೆ ಬರುವುದು ಅತ್ಯಗತ್ಯ ಎಂದರು.
ಸಭೆಯಲ್ಲಿ ಜೆಡಿಎಸ್ ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಮಾತನಾಡಿದರು. ಮೈಮುಲ್ ಮಾಜಿ ನಿರ್ದೇಶಕ ಎಚ್.ಡಿ.ರಾಜೇಂದ್ರ, ಮುಖಂಡರಾದ ದೊರೆಕೆರೆ ನಾಗೇಂದ್ರ, ವಕೀಲ ಜೆ.ಎಸ್.ನಾಗರಾಜ್, ಸತೀಶ್, ಎಸ್.ರಾಮು, ಎಂ.ಜೆ.ಸ್ವಾಮಿ, ಮೈಲಾರಪ್ಪ, ಶಿವಣ್ಣ, ನಿರಂಜನ್, ಕುಮಾರ್, ತಿಮ್ಮನಾಯಕ, ಸುನೀತಾ, ಮಂಜುನಾಥ್ ಸಿಂಗ್, ಸೋಮಶೇಖರ್, ಗಗನ್, ರಾಮಚಂದ್ರ ಇತರರು ಇದ್ದರು.